ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಹೆಸರಾಂತ ನಟ ಚಿರಂಜೀವಿ ಅವರಿಗೆ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದೆ. ಈ ಹಿನ್ನೆಲೆ ಜನಪ್ರಿಯ ನಟನ ಕಟ್ಟಾ ಅಭಿಮಾನಿಯೊಬ್ಬರು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಚಿರಂಜೀವಿ ಚಿತ್ರ ಪ್ರದರ್ಶಿಸೋ ಮುಖೇನ ಗೌರವ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಇದರ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುವ ವಿಡಿಯೋದಲ್ಲಿ, ಚಿರಂಜೀವಿ ಅವರ ಚಿತ್ರವನ್ನು ಅವರ ಕಟ್ಟಾ ಅಭಿಮಾನಿಗಳಾದ ಶ್ರೀನಿವಾಸ್ ನಾಯ್ಡು ಮತ್ತು ಟಿಮ್ಮಿ ಚೀಡಲ ಅವರು ಟೈಮ್ಸ್ ಸ್ಕ್ವೇರ್‌ನಲ್ಲಿ ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಟೈಮ್ಸ್ ಸ್ಕ್ವೇರ್‌ನಲ್ಲಿ ಪ್ರದರ್ಶನಗೊಂಡ ಚಿತ್ರದಲ್ಲಿ, ಸೌತ್ ಸೂಪರ್ ಸ್ಟಾರ್ ಚಿರಂಜೀವಿ ಅವರು ಬಿಳಿ ಪಟ್ಟು ಪಂಚೆ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋ ಮೇಲೆ, "ಭಾರತದ ಅತ್ಯಂತ ಪ್ರತಿಷ್ಠಿತ ಮತ್ತು ಅತ್ಯುನ್ನತ ನಾಗರಿಕ ಪ್ರಶಸ್ತಿ - ಪದ್ಮವಿಭೂಷಣ ತಮ್ಮದಾಗಿಸಿಕೊಂಡಿದ್ದಕ್ಕಾಗಿ ಮೆಗಾಸ್ಟಾರ್ ಚಿರಂಜೀವಿ ಗಾರು ಅವರಿಗೆ ಅಭಿನಂದನೆಗಳು" ಎಂದು ಬರೆಯಲಾಗಿದೆ.
ಇತ್ತೀಚೆಗಷ್ಟೇ ಪದ್ಮ ಪ್ರಶಸ್ತಿಗಳು ಘೋಷಣೆಯಾಗಿವೆ. ಮನೋರಂಜನಾ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಳ ಹಿನ್ನೆಲೆ ಚಿರಂಜೀವಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಟನ ಅಸಂಖ್ಯಾತ ಅಭಿಮಾನಿಗಳೂ ಸೇರಿದಂತೆ ಚಿತ್ರರಂಗದ ಖ್ಯಾತನಾಮರೂ ಸಹ ಹಿರಿಯ ನಟನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಾಲಿನಲ್ಲಿ ಜೂನಿಯರ್ ಎನ್‌ಟಿಆರ್, ಮಮ್ಮುಟ್ಟಿ, ಶಿವ ರಾಜ್ಕುಮಾರ್ ಮತ್ತು ಮಹೇಶ್ ಬಾಬು ಸೇರಿದಂತೆ ಹಲವರು ಇದ್ದಾರೆ. ಕೆಲ ನಿರ್ದೇಶಕರು, ನಟರು ಚಿರಂಜೀವಿ ಅವರನ್ನು ಖುದ್ದಾಗಿ ಭೇಟಿ ಮಾಡಿದ್ದಾರೆ. ರಾಮ್ ಚರಣ್, ಉಪಾಸನಾ ಕೊನಿಡೇಲ, ವರುಣ್ ತೇಜ್, ಅಲ್ಲು ಅರ್ಜುನ್ ಮತ್ತು ಇತರರು ಸೇರಿದಂತೆ ಮೆಗಾ ಫ್ಯಾಮಿಲಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.