ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಮತ್ತು ಸಮಾಜ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಸೌತ್ ಸಿನಿಮಾ ಇಂಡಸ್ಟ್ರಿಯ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದೆ. ಜನವರಿ 25 ರಂದು ಭಾರತದ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ ಅನಾವರಣಗೊಳಿಸಲಾಗಿತ್ತು. ಸಿನಿ ವಲಯದಲ್ಲಿ ಚಿರಂಜೀವಿ ಅವರು ಈ ಗೌರವಕ್ಕೆ ಪಾತ್ರರಾಗಲಿದ್ದು, ಅಭಿಮಾನಿಗಳೂ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹೆಸರಾಂತ ನಟನಿಗೆ ಅಭಿನಂದನೆ ತಿಳಿಸಿದ್ದಾರೆ. ಹಲವರು ನಟನನ್ನು ಭೇಟಿಯಾಗಿ ಉತ್ತಮ ಕ್ಷಣಗಳನ್ನು ಕಳೆದಿದ್ದಾರೆ.
ತೆಲಂಗಾಣ ರಾಜ್ಯಪಾಲರನ್ನು ಭೇಟಿಯಾದ ಚಿರಂಜೀವಿ: ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ರಾಜಭವನಕ್ಕೆ ಭೇಟಿ ನೀಡುವಂತೆ ಹಿರಿಯ ನಟ ಚಿರಂಜೀವಿ ಅವರನ್ನು ಆಹ್ವಾನಿಸಿದ್ದರು. ರಾಜ್ಯಪಾಲರ ವಿಶೇಷ ಆಹ್ವಾನದ ಮೇರೆಗೆ ಫೆಬ್ರವರಿ 9, ಶುಕ್ರವಾರದಂದು ಮೆಗಾಸ್ಟಾರ್ ರಾಜಭವನಕ್ಕೆ ಆಗಮಿಸಿ ರಾಜ್ಯಪಾಲರನ್ನು ಭೇಟಿ ಮಾಡಿದರು. ರಾಜ್ಯಪಾಲರು, ನಟನ ಸಾಧನೆ ಗುರುತಿಸಿ, ಅಭಿನಂದನೆ ತಿಳಿಸಿ ಸನ್ಮಾನಿಸಿದರು. ಈ ವಿಶೇಷ ಕ್ಷಣವನ್ನು ನಟ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ.
ಶುಕ್ರವಾರದಂದು ರಾಜಭವನದಲ್ಲಿ ಚಿರಂಜೀವಿ ಅವರನ್ನು ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಬಹಳ ಸಂತಸದಿಂದ ಸ್ವಾಗತಿಸಿದರು. ನಟನಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ನಿಡಿ ಗೌರವಿಸಿದರು. ನಂತರ ಭಗವಾನ್ ಸುಬ್ರಮಣ್ಯಂ ಸ್ವಾಮಿಯ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು. ಬಳಿಕ ಇಬ್ಬರೂ ಕೆಲ ವಿಷಯಗಳ ಬಗ್ಗೆ ಚರ್ಚಿಸಿದರು.