ಬೆಂಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ಮೆಟ್ರೋ ಪಿಲ್ಲರ್‌ನ ಇಟ್ಟಿಗೆ ಚೂರು ಬಿದ್ದು ಹಾನಿಯಾದ ಘಟನೆ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಮೈಸೂರು ರಸ್ತೆಯಲ್ಲಿ ಮಂಗಳವಾರ ಸಂಭವಿಸಿತು. ಮೆಟ್ರೋ ಪಿಲ್ಲರ್ 393ರ ಬಳಿ ಘಟನೆ ನಡೆದಿದೆ. ಈ ಕುರಿತು ಬಾಗಲೂರು ನಿವಾಸಿ ನವೀನ್ ರಾಜ್ ಎಂಬವರು ನೀಡಿರುವ ದೂರಿನನ್ವಯ ಬಿಎಂಆರ್‌ಸಿಎಲ್ ಅಧಿಕಾರಿಗಳ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಏನಾಯ್ತು?: ಮಧ್ಯಾಹ್ನ ಕುಟುಂಬ ಸದಸ್ಯರೊಂದಿಗೆ ಕೆಂಗೇರಿ ಮಾರ್ಗವಾಗಿ ನವೀನ್ ರಾಜ್ ತೆರಳುತ್ತಿದ್ದರು. ಮಾರ್ಗ ಮಧ್ಯೆ ಸಿಮೆಂಟ್ ಇಟ್ಟಿಗೆ ಚೂರು ಬಿದ್ದು, ಕಾರಿನ ಸನ್ ರೂಫ್ ಮತ್ತು ಮುಂಭಾಗದ ಗಾಜು ಜಖಂಗೊಂಡಿದೆ. ಗಾಬರಿಗೊಂಡ ನವೀನ್ ರಾಜ್ ಹಾಗೂ ಕುಟುಂಬ ಸದಸ್ಯರು ಪರಿಶೀಲಿಸಿದ್ದಾರೆ. ಮೆಟ್ರೋ ರೈಲು ಚಲಿಸುವಾಗ ಅದುರಿಕೆ(Vibration)ಯಿಂದ ಇಟ್ಟಿಗೆ ಚೂರು ಬಿದ್ದಿರುವುದು ತಿಳಿದು ಬಂದಿದೆ. ಈ ಕುರಿತು ಬಿಎಂಆರ್‌ಸಿಎಲ್‌ನ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಬಿಎಂಆರ್‌ಸಿಎಲ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಪರಿಹಾರ ಕೊಡಿಸುವಂತೆ ನವೀನ್ ರಾಜ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಾಗಿದೆ. ವಿಚಾರಣೆ ನಡೆಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಡಬಲ್ ಡೆಕ್ಕರ್ ಮೆಟ್ರೋ: ಟೆಂಡರ್ ಕರೆದ ಬಿಎಂಆರ್‌ಸಿಎಲ್