ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ದರ್ಶನ್ ಸೂಪರ್ ಹಿಟ್ ಸಿನಿಮಾಗಳ ಜೊತೆಗೆ ಕೆಲ ಮಾನವೀಯ ಕಾರ್ಯಗಳಿಂದಲೂ ಗುರುತಿಸಿಕೊಂಡಿದ್ದಾರೆ. 2002ರಲ್ಲಿ ಸಿನಿಮಾ ವೃತ್ತಿಜೀವನ ಆರಂಭಿಸಿದ ದಚ್ಚು ಈವರೆಗೆ ಹಲವು ಹಿಟ್ ಚಿತ್ರಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಕೊನೆಯದಾಗಿ ತೆರೆಕಂಡ ಕಾಟೇರ ಕೂಡ ಸೂಪರ್ ಹಿಟ್ ಸಿನಿಮಾ ಲಿಸ್ಟ್ಗೆ ಸೇರಿದೆ. ಅತ್ಯುತ್ತಮ ಅಭಿನಯಕ್ಕೆ ಹೆಸರುವಾಸಿಯಾಗಿರುವ ದರ್ಶನ್ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಭದ್ರ ನೆಲೆ ಹೊಂದಿದ್ದಾರೆ. ಯಶಸ್ವಿ ಚಿತ್ರಗಳ ಜೊತೆಗೆ ಸಮಾಜ ಸೇವೆಯೂ ನಟನ ಜೀವನದ ಒಂದು ಭಾಗ.
ಡಿಬಾಸ್ ಪ್ರಾಣಿಪ್ರಿಯ ಅನ್ನೋದು ಹೆಚ್ಚಿನವರಿಗೆ ತಿಳಿದಿರುವ ವಿಚಾರವೇ. ಅದೆಷ್ಟೋ ಪ್ರಾಣಿ ಪಕ್ಷಿಗಳನ್ನು ಸಾಕಿಕೊಂಡಿದ್ದಾರೆ. ಇದೀಗ ಇಹಲೋಕ ತ್ಯಜಿಸಿರುವ ಅರ್ಜುನ ಆನೆ ಬಗ್ಗೆ ಮಾತನಾಡಿದ್ದಾರೆ. ದಸರಾ ಅಂಬಾರಿ ಹೊತ್ತು ಗಜಗಾಂಭೀರ್ಯಕ್ಕೆ ಹೆಸರುವಾಸಿ ಆಗಿದ್ದ ಅರ್ಜುನ ಆನೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ನಟನ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದರ್ಶನ್ ಪೋಸ್ಟ್ನಲ್ಲೇನಿದೆ?ಇನ್ಸ್ಟಾಗ್ರಾಮ್, ಎಕ್ಸ್ ಸೇರಿದಂತೆ ಜನಪ್ರಿಯ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ನಟ ದರ್ಶನ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ''ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು'' ಎಂದು ಬರೆದುಕೊಂಡಿದ್ದಾರೆ.