ಸ್ವರ್ಗ ಮತ್ತು ನರಕ ಎಂಬ ವಿಭಿನ್ನ ಕಾನ್ಸೆಪ್ಟ್ ಮೂಲಕ ಅದ್ಧೂರಿಯಾಗಿ ಶುಭಾರಂಭ ಮಾಡಿದ್ದ 'ಬಿಗ್ ಬಾಸ್ ಸೀಸನ್ 11' ಎರಡನೇ ವಾರಾಂತ್ಯ ಬಂದು ತಲುಪಿದೆ. ವೀಕೆಂಡ್ ಕಾರ್ಯಕ್ರಮಕ್ಕೂ ಮುನ್ನ ಮನೆಯಲ್ಲೊಂದು ಮಹತ್ವದ ಬದಲಾವಣೆ ನಡೆದಿದೆ. ಅದುವೇ ಸ್ವರ್ಗ ಮತ್ತು ನರಕ ಎಂಬ ವಿಭಿನ್ನ ವಾತಾವರಣವೀಗ ಒಂದಾಗಿದೆ. ಹೌದು, ಕಳೆದ ರಾತ್ರಿ ಪ್ರಸಾರ ಕಂಡಿರುವ ಸಂಚಿಕೆಯಲ್ಲಿ ಹೆಲ್ ಮತ್ತು ಹೆವೆನ್ ಕಾನ್ಸೆಪ್ಟ್ ಅನ್ನು ಒಂದುಗೂಡಿಸಲಾಗಿದೆ.
ಒಂದಾಯ್ತು ಸ್ವರ್ಗ ನರಕ: ಕಳೆದ ಸಂಚಿಕೆಯಲ್ಲಿ, ಎಮರ್ಜೆನ್ಸಿ ಜೋರಾಗಿ ಹೊಡೆದುಕೊಂಡಿದ್ದು, ಮನೆಯಲ್ಲಿದ್ದ ಸ್ಪರ್ಧಿಗಳು ಭಯಭೀತರಾಗಿದ್ದರು. ಕ್ರೇನ್ ಸಹಾಯದಿಂದ ಮನೆಯೊಳಗೆ ಪ್ರವೇಶ ಪಡೆದ ಬಿಗ್ ಬಾಸ್ ಸಿಬ್ಬಂದಿ ನರಕನಿವಾಸವನ್ನು ಗೆಡವಿದ್ದಾರೆ. ಮೊದಲಿಗೆ ಸಖತ್ ರಫ್ ಆಗಿ ವರ್ತಿಸಿದ ಸಿಬ್ಬಂದಿ, ನರಕ ನಿವಾಸದಲ್ಲಿದ್ದ ವಸ್ತುಗಳನ್ನು ತಂದು ಒಂದೆಡೆ ಎಸೆದಿದ್ದಾರೆ. ಕಬ್ಬಿಣದ ತಡೆಗೋಡೆಗಳನ್ನು ಸಹ ಕಿತ್ತೆಸೆದಿದ್ದಾರೆ. ನಂತರ ಬೃಹತ್ ತಡೆಗೋಡೆಯನ್ನು ಕ್ರೇನ್ ಸಹಾಯದಿಂದಲೇ ಹೊರಕ್ಕೆ ಕೊಂಡೊಯ್ದಿದ್ದಾರೆ. ಮೊದಲು ಮನೆಯ ಸದಸ್ಯರ ಜೊತೆ ಜೊತೆಗೆ ಹೊರಗಿನ ಪ್ರೇಕ್ಷಕರೂ ಸಹ ಗೊಂದಲಕ್ಕೊಳಗಾಗಿದ್ದರು. ನಂತರ, ಬಿಗ್ ಬಾಸ್ ಇನ್ಮುಂದೆ ಮನೆಮಂದಿಯೆಲ್ಲಾ ಒಟ್ಟಾಗಿ ದಿನದೂಡಲಿದ್ದೀರಿ ಎಂದು ತಿಳಿಸಿದಾಗ ಇಡೀ ಮನೆ ಸಂತಸಗೊಂಡಿದೆ.
ಬಿಗ್ ಬಾಸ್ ಕ್ಯಾಪ್ಟನ್:ಮುಂದಿನ ಕ್ಯಾಪ್ಟನ್ಗಾಗಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಶಿಶಿರ್ ಶಾಸ್ತ್ರಿ, ಗೌತಮಿ ಜಾದವ್, ಚೈತ್ರಾ ಕುಂದಾಪುರ ಅವರನ್ನು ಮನೆಮಂದಿ ಈ ಆಟಕ್ಕೆ ಆಯ್ಕೆ ಮಾಡಿದ್ದರು. ಆಟದಲ್ಲಿ ಮುನ್ನಡೆ ಸಾಧಿಸಿದ ಶಿಶಿರ್ ಅವರು ಗೌತಮಿ ಅವರನ್ನು ಆಟದಿಂದ ಹೊರಕ್ಕೆ ಕಳುಹಿಸಿದರು. ಅಂತಿಮವಾಗಿ, ಶಿಶಿರ್ ಶಾಸ್ತ್ರಿ ವರ್ಸಸ್ ಚೈತ್ರಾ ಕುಂದಾಪುರ ಆಟ ನಡೆಯಿತು. ಫೈನಲಿ, ಶಿಶಿರ್ ಶಾಸ್ತ್ರಿ ಟಾಸ್ಕ್ನಲ್ಲಿ ಗೆದ್ದು, ಮನೆಯ ಕ್ಯಾಪ್ಷನ್ ಅಗಿ ಆಯ್ಕೆ ಆಗಿದ್ದಾರೆ.