ನಟಿ ಭೂಮಿ ಪೆಡ್ನೇಕರ್ ಸಾಮಾಜಿಕ ಸಮಸ್ಯೆಗಳ ಬಗ್ಗೆ ತಮ್ಮ ದನಿ ಎತ್ತುತ್ತಲೇ ಬಂದಿದ್ದಾರೆ. ಇದೀಗ ನಟಿ ತಮ್ಮ ಬಹುನಿರೀಕ್ಷಿತ 'ಭಕ್ಷಕ್' ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು, ಬಾಲಕಿಯರ ಆಶ್ರಯತಾಣದಲ್ಲಿ ನಡೆಯೋ ದೌರ್ಜನ್ಯಗಳನ್ನು ಬಹಿರಂಗಪಡಿಸುವ ಮತ್ತು ಅಧಿಕಾರಿಗಳ ಹಿಡಿತದಲ್ಲಿ ಆ ಯುವ ಜೀವಗಳನ್ನು ರಕ್ಷಿಸುವ ದಿಟ್ಟ ಪತ್ರಕರ್ತೆ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಪ್ರಚಾರದ ಸಂದರ್ಭದಲ್ಲಿ, ಭೂಮಿ ಪಡ್ನೇಕರ್ 14ನೇ ವಯಸ್ಸಿನಲ್ಲಿ ತಾವು ಅನುಭವಿಸಿದ ಭಯಾನಕ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.
ಭಕ್ಷಕ್ ಪ್ರಮೋಶನ್ ವೇಳೆ, ಭೂಮಿ ತಮ್ಮ ಕರಾಳ ದಿನಗಳನ್ನು ನೆನಪಿಸಿಕೊಂಡರು. ತಮ್ಮ ಕುಟುಂಬಸ್ಥರೊಂದಿಗೆ ಉತ್ಸವವೊಂದರಲ್ಲಿ ಭಾಗಿಯಾಗಿದ್ದ ವೇಳೆ ಈ ಘಟನೆ ಸಂಭವಿಸಿತ್ತು. "ಮತ್ತೆ ಮತ್ತೆ ಅನುಚಿತವಾಗಿ ಸ್ಪರ್ಶಿಸಲ್ಪಡುತ್ತಿದ್ದೆ, ಆಗ ನಾನು ಬಹಳ ಆತಂಕಕ್ಕೆ ಒಳಗಾಗಿದ್ದೆ" ಎಂದು ತಿಳಿಸಿದ್ದಾರೆ.
ತನ್ನ ಕುಟುಂಬದೊಂದಿಗೆ ಇದ್ದರೂ ಕೂಡ ಆ ಘಟನೆ ನನ್ನನ್ನು ಭಯಭೀತಗೊಳಿಸಿತ್ತು. ಆ ಸಮಯದಲ್ಲಿ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. "ಅಂದಿನ ಅನುಭವ ನನಗೆ ಇನ್ನೂ ನೆನಪಿದೆ. ನನಗೆ ಚಿವುಟಿದ್ದನ್ನು ಇಂದಿಗೂ ನೆನಪಿಸಿಕೊಳ್ಳುತ್ತೇನೆ. ಇದು ನಿಮ್ಮ ದೇಹ ನೆನಪಿಸಿಕೊಳ್ಳುತ್ತಿರುವಂತೆ. ಇವುಗಳು ನೀವು ಹೊರಬರಲು ಸಾಧ್ಯವಾಗದ ಆಘಾತಗಳು" ಎಂದು ಭೂಮಿ ಕರಾಳ ಕ್ಷಣಗಳನ್ನು ಹಂಚಿಕೊಂಡರು. ಜನಸಮೂಹದ ನಡುವೆ ಅಂತಹ ವ್ಯಕ್ತಿಯನ್ನು ಗುರುತಿಸುವುದು ಸವಾಲೇ ಸರಿ ಎಂದು ಕೂಡ ನಟಿ ತಿಳಿಸಿದರು.