ನವದೆಹಲಿ:ಭಾರತದ ಪ್ರಸಿದ್ಧ ಶಾಸ್ತ್ರೀಯ ನೃತ್ಯ ಪ್ರಕಾರಗಳಾದಭರತನಾಟ್ಯ ಮತ್ತು ಕೂಚಿಪುಡಿ ಹಿರಿಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ (84) ಅವರು ಶನಿವಾರ ಇಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
7 ತಿಂಗಳಿನಿಂದ ಐಸಿಯುನಲ್ಲಿ ಚಿಕಿತ್ಸೆ: "ಯಾಮಿನಿ ಕೃಷ್ಣಮೂರ್ತಿ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಕಳೆದ ಏಳು ತಿಂಗಳಿಂದ ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು" ಎಂದು ಯಾಮಿನಿ ಅವರ ಮ್ಯಾನೇಜರ್ ಗಣೇಶ್ ತಿಳಿಸಿದ್ದಾರೆ.
ಅಪೋಲೋ ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿದ್ದು, "ವೈದ್ಯರ ತಂಡದ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಡಾ.ಯಾಮಿನಿ ಕೃಷ್ಣಮೂರ್ತಿ ಶನಿವಾರ ಮಧ್ಯಾಹ್ನ ನಿಧನರಾದರು. ಸಂತಾಪಗಳು" ಎಂದು ತಿಳಿಸಿದೆ.
ಇಹಲೋಕದ ನಾಟ್ಯ ಮುಗಿಸಿದ ವಿಶಾರದೆ: ಡಿಸೆಂಬರ್ 20, 1940ರಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ಯಾಮಿನಿ ಕೃಷ್ಣಮೂರ್ತಿ ಜನಿಸಿದರು. ತಂದೆ ಎಂ.ಕೃಷ್ಣಮೂರ್ತಿ ಸಂಸ್ಕೃತ ವಿದ್ವಾಂಸರು. ಐದನೇ ವಯಸ್ಸಿನಲ್ಲೇ ಚೆನ್ನೈನ ಕಲಾಕ್ಷೇತ್ರ ಸ್ಕೂಲ್ ಆಫ್ ಡ್ಯಾನ್ಸ್‌ನಲ್ಲಿ ಪೌರಾಣಿಕ ಭರತನಾಟ್ಯ ನೃತ್ಯಗಾರ್ತಿ ರುಕ್ಮಿಣಿ ದೇವಿ ಅರುಂಡೇಲ್ ಮಾರ್ಗದರ್ಶನದಲ್ಲಿ ಯಾಮಿನಿ ನೃತ್ಯ ತರಬೇತಿ ಪಡೆದರು. ಕೂಚಿಪುಡಿ ನೃತ್ಯದಲ್ಲಿ ಪ್ರವೀಣೆಯಾಗಿದ್ದ ಯಾಮಿನಿ, ಪಂಕಜ್ ಚರಣ್ ದಾಸ್ ಮತ್ತು ಕೇಲುಚರಣ್ ಮೊಹಾಪಾತ್ರ ಅವರಿಂದ ಒಡಿಸ್ಸಿ ಶಾಸ್ತ್ರೀಯ ನೃತ್ಯ ಕಲಿಯುವ ಮೂಲಕ ತಮ್ಮ ಕಲಾ ಸಾಧನೆಯನ್ನು ಮತ್ತಷ್ಟು ವಿಸ್ತರಿಸಿದ್ದರು. ವಿವಿಧ ನೃತ್ಯ ಪ್ರಕಾರಗಳನ್ನು ಕಲಿಯುವುದರೊಂದಿಗೆ, ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವೀಣೆ ತರಬೇತಿ ಪಡೆದರು.
ಮೇರು ಸಾಧನೆಗೆ ಸಂದ ಪ್ರಶಸ್ತಿಗಳು ಹಲವು: 1968ರಲ್ಲಿ 28ನೇ ವಯಸ್ಸಿನಲ್ಲಿ ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ ಮತ್ತು 2016ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳು ಯಾಮಿನಿ ಅವರ ಸಾಧನೆಯನ್ನು ಹುಡುಕಿಕೊಂಡು ಬಂದವು. 1977ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಲಿಭಿಸಿತು.