ಹೈದರಾಬಾದ್: ಭೂಮಿ ಪಡ್ನೇಕರ್ ಅಭಿನಯದ ಕ್ರೈಂ ಥ್ರಿಲ್ಲರ್ ಚಿತ್ರ 'ಭಕ್ಷಕ್' ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಮಹಿಳಾ ಪತ್ರಕರ್ತೆಯೊಬ್ಬರ ಸತ್ಯಾನ್ವೇಷಣೆಯ ಕಥೆಯನ್ನು ಇದು ಹೊಂದಿದೆ. ನೈಜ ಘಟನೆ ಆಧಾರಿತ ಈ ಚಿತ್ರದಲ್ಲಿ ಭೂಮಿ ಪಡ್ನೆಕರ್ ವೈಶಾಲಿ ಸಿಂಗ್ ಎಂಬ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ಅನಾವರಣ ಮತ್ತು ಅಪರಾಧ ಲೋಕದ ಮೇಲೆ ಬೆಳಕು ಚೆಲ್ಲುವ ತನಿಖಾ ಪತ್ರಕರ್ತೆಯಾಗಿ ಪಾತ್ರ ಪೋಷಣೆ ಮಾಡಿದ್ದಾರೆ
ಈ ಚಿತ್ರವೂ ಫೆಬ್ರವರಿ 9ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ಚಿತ್ರವನ್ನು ಪುಲ್ಕಿಟ್ ನಿರ್ದೇಶಿಸಿದ್ದು, ಭೂಮಿ ಪಡ್ನೇಕರ್ ಜೊತೆಗೆ ಸಂಜಯ್ ಮಿಶ್ರಾ, ಆದಿತ್ಯ ಶ್ರೀವಾತ್ಸವ ಮತ್ತು ಸಾಯಿ ತಮ್ಹಂಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಕಿಯರ ಆಶ್ರಯತಾಣದಲ್ಲಿ ನಡೆಯುವ ಮಕ್ಕಳ ಮೇಲಿನ ದೌರ್ಜನ್ಯದ ಅನಾವರಣ ಚಿತ್ರದ ಒನ್ಲೈನ್ ಸ್ಟೋರಿಯಾಗಿದೆ.
'ಕೊಠಡಿ ತುಂಬಾ ಅನಾಥ ಯುವತಿಯರು ತುಂಬಿರುವ ದೃಶ್ಯದಿಂದ ಟ್ರೈಲರ್ ಆರಂಭವಾಗುತ್ತದೆ. ಮಕ್ಕಳ ಜೊತೆಯಲ್ಲಿ ತಪ್ಪು ನಡೆದಿರುವ ಕುರಿತು ತಿಳಿಯುವ ಭೂಮಿ ಈ ಸಂಬಂಧ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗುತ್ತಾಳೆ. ಈ ತನಿಖೆ ಸಾಗಿದಂತೆ ಪ್ರಕರಣದಲ್ಲಿ ಸಚಿವರು ಸೇರಿದಂತೆ ಅನೇಕ ಉನ್ನತ ಅಧಿಕಾರಿಗಳು ಭಾಗಿಯಾಗಿರುವುದು ತಿಳಿದು ಬರುತ್ತದೆ. ಈ ಪ್ರಕರಣದ ಸತ್ಯಾಂಶವನ್ನು ಹೊರತೆಗೆಯುವಲ್ಲಿ ಪತ್ರಕರ್ತೆ ಎದುರಿಸುವ ಸವಾಲುಗಳನ್ನು ಸಿನಿಮಾ ತೆರೆದಿಡುತ್ತದೆ.