ಮಂಗಳೂರು (ದಕ್ಷಿಣ ಕನ್ನಡ): ಪೌರಾಣಿಕ ಆಶಯದಲ್ಲಿ ನೋಡಿದಾಗ 'ಕಾಲಮಿತಿ' ಯಕ್ಷಗಾನದ ಆಶಯಕ್ಕೆ ಧಕ್ಕೆ ಎಂದೇ ಹೇಳಬಹುದು. ಆದರೆ ಕಾಲವನ್ನು ಹೊಂದಿಕೊಂಡು ನೋಡಿದಾಗ ಕಾಲಮಿತಿ ಧಕ್ಕೆ ಎಂದೆನಿಸದೇ, ಜನರಿಗೆ ಯಾವುದು ಬೇಕೋ ಅದನ್ನು ಬಯಸುತ್ತಿದ್ದಾರೆ. ಅದನ್ನು ಪ್ರಸ್ತುತ ಸಂದರ್ಭದಲ್ಲಿ ಕಾಲಮಿತಿಯ ಮೂಲಕ ಕೊಡಲಾಗುತ್ತಿದೆ ಎಂದು ಪ್ರಸಿದ್ಧ ಭಾಗವತ, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ನಗರದಲ್ಲಿ ಕಾಲಮಿತಿ ಯಕ್ಷಗಾನದ ಬಗ್ಗೆ ಮಾತನಾಡಿದ ಪಟ್ಲ ಸತೀಶ್ ಶೆಟ್ಟಿ ಅವರು, ಕಾಲಮಿತಿ ಯಕ್ಷಗಾನದಿಂದ ಕಲಾವಿದರಿಗೆ ಪರ್ಯಾಯ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಮೊದಲು ಪರ್ಯಾಯ ಉದ್ಯೋಗ ಕಷ್ಟಸಾಧ್ಯ ಎನಿಸುತ್ತಿತ್ತು. ಅಲ್ಲದೇ ಈಗ ಯಕ್ಷಗಾನಕ್ಕೆ ಬೇಕಾದಷ್ಟು ಕಲಾವಿದರೂ ಸಿಗುತ್ತಿದ್ದಾರೆ. ಅದೇ ಯಕ್ಷಗಾನವನ್ನು ವೃತ್ತಿಯಾಗಿ ತೆಗೆದುಕೊಂಡವರಿಗೆ ಹಗಲು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಗೀತ, ಭರತನಾಟ್ಯದ ರೀತಿ ಯಕ್ಷಶಿಕ್ಷಣಕ್ಕೂ ಯೋಜನೆ ರೂಪಿಸಲು ಚಿಂತನೆ ನಡೆಸುತ್ತಿದ್ದೇವೆ. ಯಕ್ಷಧ್ರುವ ಪಟ್ಲ ಫೌಂಡೇಶನ್ನಲ್ಲಿನ ಯಕ್ಷಗುರುಗಳಿಗೆ ನಿಯಮಿತ ಸಿಲೆಬಸ್ನಲ್ಲಿ ಯಕ್ಷಶಿಕ್ಷಣ ನೀಡಬೇಕೆಂದು ಆದೇಶವಿದೆ. ಆದ್ದರಿಂದ ಒಬ್ಬೊಬ್ಬರು ಒಂದೊಂದು ಸಿಲೆಬಸ್ನಲ್ಲಿ ಕಲಿಸಲು ಸಾಧ್ಯವಿಲ್ಲ. ಶೈಲಿ ಯಾವುದೇ ಇರಲಿ. ಆದರೆ ನಿಯಮಿತ ಪಠ್ಯವನ್ನು ಮಾಡಿ ಅದರ ಅನ್ವಯದಂತೆ ಶಿಕ್ಷಣ ನೀಡುವುದು ಉತ್ತಮ ಎಂದು ಪಟ್ಲ ಸತೀಶ್ ಶೆಟ್ಟಿ ಹೇಳಿದರು.