'ಜವಾನ್' ಎಂಬ ಬ್ಲಾಕ್ಬಸ್ಟರ್ ಸಿನಿಮಾ ಮೂಲಕ ತಮ್ಮ ಜನಪ್ರಿಯತೆಯನ್ನು ದುಪ್ಪಟ್ಟುಗೊಳಿಸಿಕೊಂಡ ನಿರ್ದೇಶಕ ಅಟ್ಲೀ, ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ಬಿಗ್ ಬಜೆಟ್ ಆ್ಯಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸದ್ದು ಮಾಡಿತ್ತು. ಲೇಟೆಸ್ಟ್ ವರದಿಗಳ ಪ್ರಕಾರ, ಅಟ್ಲೀ ಅವರೀಗ ಸಲ್ಮಾನ್ ಖಾನ್ ಮತ್ತು ಕಮಲ್ ಹಾಸನ್ ಅವರೊಂದಿಗೆ ತಮ್ಮ ಮುಂದಿನ ಪ್ರಾಜೆಕ್ಟ್ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಬಿಗ್-ಬಜೆಟ್ ಸಿನಿಮಾದಲ್ಲಿ ಇಬ್ಬರು ನಾಯಕರ ಕಥೆಯಿರಲಿದೆ. ಬಾಲಿವುಡ್ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ತಮಿಳಿನ ಟಾಪ್ ಹೀರೋ ಕಮಲ್ ಹಾಸನ್ ನಟಿಸೋದು ಅಧಿಕೃತವಾದರೆ, ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಪಕ್ಕಾ.
ಪ್ರೊಜೆಕ್ಟ್ನ ಆಪ್ತ ಮೂಲಗಳ ಪ್ರಕಾರ, ಹಲವು ತಿಂಗಳುಗಳಿಂದ ಅಟ್ಲೀ ಈ ಇಬ್ಬರು ಸೆಲೆಬ್ರಿಟಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಡ್ಯುಯಲ್-ಹೀರೋ ಪ್ರಾಜೆಕ್ಟ್ಗೆ ಇಂಡಿಯನ್ ಸೂಪರ್ ಸ್ಟಾರ್ಗಳ ಸಹಕಾರ ಅಗತ್ಯವಿದೆ. ಅತ್ಯಂತ ಜನಪ್ರಿಯ ನಟರು, ಹೆಸರಾಂತ ನಿರ್ದೇಶಕ ಸೇರಿ ಸಿನಿಮಾ ಮಾಡಿದ್ರೆ, ಹೇಗೆ ಮೂಡಿಬರಬಹುದು? ಎಂಬುದನ್ನು ನೇವೇ ಊಹಿಸಿ.
ಸ್ಟಾರ್ ನಟರು ಸಿನಿಮಾಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರೂ, ಈ ತಿಂಗಳ ಕೊನೆಗೆ ಎಲ್ಲವೂ ಅಧಿಕೃತಗೊಳ್ಳುವ ನಿರೀಕ್ಷೆ ಇದೆ. ಕೆಲ ಮೂಲಗಳ ಪ್ರಕಾರ, "ಇದು ಇಬ್ಬರು ಸೂಪರ್ ಸ್ಟಾರ್ಗಳಿಗೆ ಅರ್ಹವಾದ ಪ್ರೊಜೆಕ್ಟ್. ಕಮಲ್ ಹಾಸನ್ ಮತ್ತು ಸಲ್ಮಾನ್ ಖಾನ್ ಇಬ್ಬರೂ ಅಟ್ಲೀ ಸಿನಿಮಾ ಬಗ್ಗೆ ಉತ್ಸಾಹ ತೋರಿಸಿದ್ದಾರೆ. ಜೊತೆಗೆ, ಒಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ. ಎರಡೂ ಕಡೆಯಿಂದಲೂ ಉತ್ಸಾಹ ವ್ಯಕ್ತವಾಗಿದೆ. ಅದಾಗ್ಯೂ, ಈ ತಿಂಗಳ ಕೊನೆಯಲ್ಲಿ ಸಿನಿಮಾದ ಸಂಪೂರ್ಣ ನಿರೂಪಣೆಯನ್ನು ಕೇಳಿದ ನಂತರ ಅಧಿಕೃತವಾಗಿ ಗ್ರೀನ್ ಸಿಗ್ನಲ್ ಸಿಗಲಿದೆ".