ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಗಳಿಗೆ ಕೊರತೆ ಇದೆಯೇ? ಇದ್ದವರಿಗೆ ಅವಕಾಶ ಯಾಕೆ ಕೊಡುತ್ತಿಲ್ಲ? ಬೇರೆ ಭಾಷೆಯ ಕಲಾವಿದರನ್ನು ಯಾಕೆ ಕರೆದುಕೊಂಡು ಬರುತ್ತಾರೆ? ಅದು ತಪ್ಪಲ್ಲ, ಆದರೆ, ಇಲ್ಲಿವರಿಗೆ ಮೊದಲ ಆದ್ಯತೆ ಕೊಡಬೇಕಲ್ಲವೇ? ನಮ್ಮ ಚಿತ್ರರಂಗದಲ್ಲಿ ಹೆಣ್ಮಕ್ಕಳು ಯಾವುದರಲ್ಲಿ ಕಡಿಮೆ ಇದ್ದಾರೆ ಹೇಳಿ? ನಟಿಸುತ್ತೇವೆ. ಸ್ವತಃ ನಾವೇ ಡಬ್ಬಿಂಗ್ ಮಾಡುತ್ತೇವೆ. ಪ್ರಚಾರಕ್ಕೆ ಹೋಗುತ್ತೇವೆ. ಇನ್ನೇನು ಬೇಕು? ನನಗೆ ಅರ್ಥವಾಗುತ್ತಿಲ್ಲ ಎಂದು ನಟಿ ಅದ್ವಿತಿ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು, ಇತ್ತೀಚೆಗಷ್ಟೇ ತಮ್ಮ ಬೇಸರವನ್ನು ಹೀಗೆ ಹೊರಹಾಕಿದ್ದಾರೆ ನಟಿ ಅದ್ವಿತಿ ಶೆಟ್ಟಿ. ಅದಕ್ಕೆ ಕಾರಣವೂ ಇದೆ. ಅವರು ಚಿತ್ರರಂಗಕ್ಕೆ ಬಂದು ಒಂದಿಷ್ಟು ವರ್ಷಗಳಾಗಿವೆ. ಬೆರಳಣಿಕೆಯ ಚಿತ್ರಗಳಲ್ಲಿ ಅದ್ವಿತಿ ನಾಯಕಿಯಾಗಿ ನಟಿಸಿದ್ದಾರೆ. ಸರಿ ಮುಂದೇನು? ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ. ಹೊಸ ಅವಕಾಶಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಅವಕಾಶಗಳು ಸಿಕ್ಕರೂ ದೊಡ್ಡ ಹೀರೋಗಳ ಅಥವಾ ದೊಡ್ಡ ಬಜೆಟ್‍ನ ಚಿತ್ರಗಳು ಸಿಗುವುದು ಕಷ್ಟ. ಹೀಗಿರುವಾಗ ಮುಂದೇನು? ಎಂಬ ಪ್ರಶ್ನೆ ಕಾಡುತ್ತಿದೆ.
ಇದು ಅದ್ವಿತಿ ಅವರೊಬ್ಬರ ಪ್ರಶ್ನೆಯಲ್ಲ. ಕನ್ನಡ ಚಿತ್ರರಂಗದಲ್ಲಿ ಕೆಲ ನಿರ್ದೇಶಕರಿಗಷ್ಟೇ ಅಲ್ಲದೇ, ನಟಿಯರಿಗೂ ಅವಕಾಶಗಳು ಸಿಗುತ್ತಿಲ್ಲ. ಬೆರಳಣಿಕೆಯಷ್ಟು ನಟಿಯರು ಒಂದಿಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಮಿಕ್ಕಂತೆ ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಆಶಿಕಾ ರಂಗನಾಥ್ ಸೇರಿದಂತೆ ಹಲವರು ಬಹುಭಾಷೆಗಳ ಪಾಲಾಗಿದ್ದಾರೆ. ಉಳಿದವರು ಮುಂದೇನು ಎಂದು ಗೊತ್ತಿಲ್ಲದೆ ಒದ್ದಾಡುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಾಯಕಿಯರ, ನಾಯಕಿ ಪ್ರಧಾನ ಚಿತ್ರಗಳ ಪರಂಪರೆ ದೊಡ್ಡದಿದೆ. ಆದ್ರೀಗ ನಾಯಕಿ ಪ್ರಧಾನ ಚಿತ್ರ ಎಂಬ ಕೆಟಗರಿ ಹೆಸರಿಗೆ ಮಾತ್ರ ಇದೆ. ಈ ಸಾಲಿನಲ್ಲಿ ವರ್ಷಕ್ಕೆ ಒಂದೋ, ಎರಡೋ ಚಿತ್ರಗಳು ಬರುವುದು ಬಿಟ್ಟರೆ, ನಾಯಕಿ ಪ್ರಧಾನ ಚಿತ್ರಗಳೆಂದರೆ ಮರೆತೇ ಹೋಗುವಂತಿದೆ. ಇನ್ನೂ, ನಾಯಕಿ ಪ್ರಧಾನ ಚಿತ್ರವಲ್ಲದಿದ್ದರೂ, ಒಂದು ಚಿತ್ರದಲ್ಲಿ ನಾಯಕಿಯರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಚಿತ್ರರಂಗದಲ್ಲಿ ಏಕಕಾಲಕ್ಕೆ 8-10 ಸಕ್ರಿಯ ನಾಯಕಿಯರಿರುತ್ತಿದ್ದರು. ಅವರೆಲ್ಲ 10-15 ವರ್ಷಗಳ ಕಾಲ ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಿದ್ದರು. ಎಲ್ಲಾ ಜನಪ್ರಿಯ ನಟರ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದರು. ಆದ್ರೀಗ ನಟಿಯರು 10 ಚಿತ್ರಗಳಲ್ಲಿ ನಟಿಸುವುದೇ ದೊಡ್ಡದು ಎನ್ನುವಂತಾಗಿದೆ. ನಾಯಕಿಯರ ಸಿನಿ ಕೆರಿಯರ್ 5 ವರ್ಷಕ್ಕಿಳಿದಿದೆ.
ಬಹುಶಃ ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಲ್ಲಿ ನಾಯಕಿಯಾಗಿ ಒಂದು ದಶಕ ಕಳೆಯುವುದರ ಜೊತೆಗೆ ಹಲವು ಚಿತ್ರಗಳಲ್ಲಿ ಜನಪ್ರಿಯ ನಾಯಕರ ಜೊತೆಗೆ ನಟಿಸಿದ ಏಕೈಕ ನಟಿ ಎಂದರೆ ಅದು ರಚಿತಾ ರಾಮ್ ಒಬ್ಬರೇ ಇರಬೇಕು. ರಚಿತಾ ರಾಮ್ ಚಿತ್ರರಂಗದಲ್ಲಿ ಒಂದು ದಶಕ ಕಳೆದಿದ್ದು, ಒಂದಿಷ್ಟು ಚಿತ್ರಗಳಲ್ಲಿ ನಟಿಸಿದರೆನ್ನುವುದು ಖುಷಿಯ ವಿಚಾರವೇ. ಆದರೆ, ಅಲ್ಲೂ ಅವರಿಗೆ ಅಭಿನಯಿಸುವುದಕ್ಕೆ ಎಷ್ಟು ಪಾತ್ರಗಳು ಸಿಕ್ಕಿದವು, ಎಷ್ಟರಲ್ಲಿ ಅವರು ಗುರುತಿಸಿಕೊಂಡರು ಎಂಬ ಬಗ್ಗೆ ದೊಡ್ಡ ಲಿಸ್ಟ್ ಕೊಡಿ ಅಂದ್ರೆ ಉತ್ತರಿಸುವುದು ಕೊಂಚ ಕಷ್ಟವೇ.
ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ದೊಡ್ಡ ಯಶಸ್ಸು ಕಂಡ ಸಿನಿಮಾ. ಆ ಚಿತ್ರದಲ್ಲಿ ನಟಿಸಿದ್ದ ಶ್ರೀನಿಧಿ ಶೆಟ್ಟಿ, ಸುದೀಪ್ ಜೊತೆಗೆ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿರುವುದು ಬಿಟ್ಟರೆ ಕನ್ನಡದ ಬೇರೆ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಕಾಂತಾರ ನಂತರ ಸಪ್ತಮಿ ಗೌಡ ಮುಂದಿನ ಸೆನ್ಸೇಷನ್ ಎಂದೇ ಹೇಳಲಾಯ್ತು. ಆ ಚಿತ್ರದ ನಂತರ ಸಪ್ತಮಿ, ಅಭಿಷೇಕ್ ಅಂಬರೀಶ್ ಅಭಿನಯದ ಕಾಳಿ ಮತ್ತು ಯುವ ರಾಜ್ಕುಮಾರ್ ಅಭಿನಯದ ಯುವ ಚಿತ್ರಗಳನ್ನು ಒಪ್ಪಿಕೊಂಡರು. ಈ ಪೈಕಿ ಕಾಳಿ ನಿಂತಿರುವ ಸುದ್ದಿ ಬಂದಿದೆ. ಯುವ ಬಿಡುಗಡೆಯಾಗಿದೆ. ಮುಂದೆ? ಗೊತ್ತಿಲ್ಲ. ಮತ್ತೊಂದೆಡೆ ರಾಬರ್ಟ್ ಚಿತ್ರದ ಯಶಸ್ಸಿನ ನಂತರವೂ ಆಶಾ ಭಟ್ ಮತ್ತೊಂದು ಚಿತ್ರದಲ್ಲಿ ನಟಿಸಲಿಲ್ಲ.