ಬೆಂಗಳೂರು: ''ಸಮಿತಿ ರಚನೆ ಒಳ್ಳೆ ವಿಷಯ. ನಾವೂ ಕೂಡಾ ಮನವಿ ಪತ್ರಕ್ಕೆ ಸಹಿ ಹಾಕುತ್ತೇವೆ. ಸಹಿ ಮಾಡಿ ನಂತರ ಶೂಟಿಂಗ್ ಮಾಡ್ತಾ ಕುಳಿತರೆ ಏನು ಅರ್ಥ. ನಂತರದ ಕೆಲಸಗಳನ್ನು ಸಹ ನಾವು ಮಾಡಬೇಕಾಗುತ್ತದೆ. ನೀವು ಹೇಳೋದರಿಂದ ನನಗೆ ಗೊತ್ತಾಗುತ್ತಿದೆ. ಹೊರಗೆ ಹೋಗಿ ವಿಷಯ ಏನೆಂದು ನೋಡುತ್ತೇನೆ'' ಎಂದು ಕನ್ನಡದ ಜನಪ್ರಿಯ ನಟ ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.
'ಫೈರ್ ಫಿಲ್ಮ್ ಇಂಡಸ್ಟ್ರಿ ಫಾರ್ ಈಕ್ವಾಲಿಟಿ' ಸಂಘ ಕನ್ನಡ ಚಿತ್ರರಂಗದಲ್ಲಿನ ನಟಿಯರ ಪರಿಸ್ಥಿತಿ ಬಗ್ಗೆ ಅರಿಯಲು ಸಮಿತಿಯೊಂದನ್ನು ರಚಿಸಬೇಕು ಎಂಬ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಫೈರ್ ಅಧ್ಯಕ್ಷೆ - ಹಿರಿಯ ನಿರ್ದೇಶಕಿ ಕವಿತಾ ಲಂಕೇಶ್ ಸಹಯೋಗದಲ್ಲಿ ನಟ - ಹೋರಾಟಗಾರ ಚೇತನ್ ಅಹಿಂಸಾ, ನಟಿಯರಾದ ಶ್ರುತಿ ಹರಿಹರನ್, ನೀತು ಸೇರಿ ಗುರುವಾರದಂದು ರಾಜ್ಯದ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಿದ್ದರು.
ಕಮಿಟಿ ರಚನೆ ಆಗಲೆಂದು ಸುದೀಪ್, ಕಿಶೋರ್, ನಟಿ ರಮ್ಯಾ, ಐಂದ್ರಿತಾ ರೇ, ಶರತ್ ಲೋಹಿತಾಶ್ವ ಸೇರಿದಂತೆ ಸಿನಿಮಾ ಮತ್ತು ವಿವಿಧ ಕ್ಷೇತ್ರಗಳ 150ಕ್ಕೂ ಹೆಚ್ಚು ಜನರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಇದರ ಬೆನ್ನಲ್ಲೇ ಕೆಲ ಗಣ್ಯರು ಈ ಕಮಿಟಿ ರಚನೆಯಾದ್ರೆ ಉಪಯೋಗವಾಗಲಿದೆ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆದರೆ ಕನ್ನಡದ ಅತ್ಯಂತ ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರಿಗೆ ತಮ್ಮದೇ ಚಿತ್ರರಂಗದ ಈ ಪ್ರಮುಖ ವಿಷಯದ ಬಗ್ಗೆ ಹೆಚ್ಚು ತಿಳದಿಲ್ಲವೆಂಬಂತೆ ತೋರುತ್ತಿದೆ. ತಾವು ನಿರ್ಮಿಸಿರುವ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರರಂಡದಿಂದ ಮಾಗಡಿ ರಸ್ತೆಯಲ್ಲಿರೋ ವಿರೇಶ್ ಚಿತ್ರಮಂದಿರದಲ್ಲಿ ವಿಶೇಷ ಈವೆಂಟ್ ಹಮ್ಮಿಕೊಳ್ಳಲಾಗಿತ್ತು. ತಾವು ನಿರ್ಮಿಸಿರುವ ಬಹುನಿರೀಕ್ಷಿತ ಚಿತ್ರದ ತಂಡದೊಂದಿಗೆ ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ.