ಏಪ್ರಿಲ್ 14 ರಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಗುಂಡು ಹಾರಿಸಿದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಆರೋಪಿ ಅನುಜ್ ಥಾಪನ್ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಮೃತ ಆರೋಪಿಯ ಕುಟುಂಬಸ್ಥರು ಆರೋಪಿಸಿದ್ದರು. ಸಿಐಡಿ ಎದುರು ತಮ್ಮ ಹೇಳಿಕೆಗಳನ್ನೂ ದಾಖಲಿಸಿದ್ದಾರೆ. ಶುಕ್ರವಾರ, ಅನುಜ್ ಥಾಪನ್ ಸಾವಿನ ಕುರಿತು 'ಸಿಬಿಐ ತನಿಖೆ'ಗೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಥಾಪನ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ರೆ, ಆರೋಪಿಯ ತಾಯಿ ರೀಟಾ ದೇವಿ ಶುಕ್ರವಾರ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಫೌಲ್ ಪ್ಲೇ, ಮಗ ಕೊಲೆಯಾಗಿದ್ದಾನೆ ಎಂದು ಹೇಳಿದ್ದಾರೆ.
ಮಗನ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶನ ನೀಡುವಂತೆ ದೇವಿ ಹೈಕೋರ್ಟ್‌ಗೆ ಮನವಿ ಮಾಡಿದ್ದು, ಮುಂದಿನ ದಿನಗಳಲ್ಲಿ ವಿಚಾರಣೆ ನಡೆಯಲಿದೆ. ಅನುಜ್ ಥಾಪನ್ ಜೈಲಿನಲ್ಲಿದ್ದಾಗ ಪೊಲೀಸರು ಹಲ್ಲೆ ನಡೆಸಿ, ಚಿತ್ರಹಿಂಸೆ ನೀಡಿದ್ದಾರೆ ಎಂಬುದಾಗಿಯೂ ಆರೋಪಿಸಿದ್ದಾರೆ. ಅಲ್ಲದೇ ಥಾಪನ್ ನನ್ನು ಬಂಧಿಸಿದ್ದ ಪೊಲೀಸ್ ಠಾಣೆ ಮತ್ತು ಲಾಕ್‌ಅಪ್‌ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಲು ಪೊಲೀಸರಿಗೆ ಆದೇಶಿಸುವಂತೆಯೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಏಪ್ರಿಲ್ 24 ರಿಂದ ಮೇ 2ರ ವರೆಗಿನ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳ ಕಾಲ್ ಡೇಟಾ ರೆಕಾರ್ಡಿಂಗ್‌ಗಳನ್ನು (ಸಿಡಿಆರ್) ಉಳಿಸಿಕೊಳ್ಳಲು ಅರ್ಜಿದಾರರು ಒತ್ತಾಯಿಸಿದ್ದಾರೆ. ಅಲ್ಲದೇ ಥಾಪನ್ ಮೃತದೇಹದ ಮತ್ತೊಂದು (ಹೊಸ) ಮರಣೋತ್ತರ ಪರೀಕ್ಷೆಗೂ ಮನವಿ ಮಾಡಿದ್ದಾರೆ.