ಜೂನಿಯರ್ ಎನ್‌ಟಿಆರ್ - ಕೊರಟಾಲ ಶಿವ ಕಾಂಬಿನೇಷನ್ನ 'ದೇವರ' ಭಾರಿ ನಿರೀಕ್ಷೆಯ ಚಿತ್ರಗಳಲ್ಲೊಂದು. ನಿರ್ದೇಶಕ ಕೊರಟಾಲ ಶಿವ ಈ ಚಿತ್ರವನ್ನು ಎರಡು ಭಾಗಗಳಲ್ಲಿ ತರೋದಾಗಿ ಈಗಾಗಲೇ ತಿಳಿಸೋ ಮುಖೇನ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ. ಕರಾವಳಿ ಹಿನ್ನೆಲೆಯಲ್ಲಿ ಸಂಪೂರ್ಣ ಆ್ಯಕ್ಷನ್ ಎಂಟರ್‌ಟೈನರ್ ಆಗಿ ’ದೇವರ‘ ಮೂಡಿ ಬರಲಿದೆ.
ಇತ್ತೀಚೆಗಷ್ಟೇ ಚಿತ್ರ ನಿರ್ಮಾಪಕರು ಒಂದು ಗ್ಲಿಂಪ್ಸ್ ಅನಾವರಣಗೊಳಿಸಿ ಸಿನಿಪ್ರಿಯರ ಉತ್ಸಾಹಕ್ಕೆ ಕಾರಣರಾಗಿದ್ದರು. ದಿವಂಗತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಈ ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಜಾಹ್ನವಿ ಇದೇ ಮೊದಲ ಬಾರಿ ಜೂನಿಯರ್ ಎನ್‌ಟಿಆರ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಈ ಸಿನಿಮಾದಲ್ಲಿ ಮತ್ತೊಬ್ಬ ನಾಯಕಿ ಇರಲಿದ್ದಾರೆ.
ಬಹುನಿರೀಕ್ಷಿತ 'ದೇವರ' ಮೂಲಕ ತೆಲುಗು ಪ್ರೇಕ್ಷಕರಿಗೆ ಬಾಲಿವುಡ್ ನಟಿ ಮಾತ್ರವಲ್ಲ, ಮರಾಠಿ ನಟಿಯೊಬ್ಬರು ಕೂಡ ಪರಿಚಯವಾಗಲಿದ್ದಾರೆ. ಹೌದು, ಮರಾಠಿ ಬ್ಯೂಟಿ ಶ್ರುತಿ ಮರಾಟೆ ಈ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. 'ದೇವರ' ಚಿತ್ರದಲ್ಲಿ ನಾಯಕ ನಟ ಜೂನಿಯರ್ ಎನ್‌ಟಿಆರ್ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ. ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ಒಂದು ಪಾತ್ರಕ್ಕೆ ನಾಯಕಿಯಾಗಿ ನಟಿಸಿದರೆ, ಎರಡನೇ ಪಾತ್ರಕ್ಕೆ ಶ್ರುತಿ ಮರಾಟೆ ಆಯ್ಕೆಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಅದಾಗ್ಯೂ ಈ ಬಗ್ಗೆ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ. ಮತ್ತೊಂದೆಡೆ, ಈ ವಿಷಯವನ್ನು ಜೂ. ಎನ್‌ಟಿಆರ್ ಫ್ಯಾನ್ಸ್ ಪೇಜ್ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಲ್ಲದೇ ಈ ಪೋಸ್ಟ್ಗೆ ನಟಿ ಶ್ರುತಿ ಕೂಡ ಪ್ರತಿಕ್ರಿಯೆ ನೀಡಿದ್ದು, ನಟನೆ ಮಾಡಲಿರೋ ಸುದ್ದಿಯನ್ನು ನಿಜ ಎಂದು ನಂಬಲಾಗಿದೆ.