ಕರ್ನಾಟಕ

karnataka

ETV Bharat / entertainment

ಅಂಬಾನಿ ಕುಟುಂಬದ ವಿವಾಹ ಮಹೋತ್ಸವ: ಅತಿಥಿಗಳಿಗೆ ಕ್ಯೂಆರ್​ ಕೋಡ್, ಕಲರ್​ ಬ್ಯಾಂಡ್ಸ್ - ಹೇಗಿತ್ತು ಗೊತ್ತಾ ಭದ್ರತೆ? - SECURITY AT ANANT RADHIKA WEDDING

ದೇಶದಲ್ಲೀಗ ಅಂಬಾನಿ ಕುಟುಂಬದ ವಿವಾಹ ಮಹೋತ್ಸವದ್ದೇ ಸದ್ದು. ದೇಶದ ಸಿರಿವಂತ ಉದ್ಯಮಿ ಮುಖೇಶ್​ ಅಂಬಾನಿ ಕಿರಿಪುತ್ರ ಅನಂತ್​​ ಶುಕ್ರವಾರದಂದು ದಾಂಪತ್ಯ ಜೀವನಕ್ಕೆ ಕಾಲಿಸಿರಿದ್ದಾರೆ. ಶನಿವಾರ ಸಂಜೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ 'ಶುಭ ಆಶೀರ್ವಾದ' ಸಮಾರಂಭ ನಡೆದಿದ್ದು, ವಿಶಿಷ್ಟ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.

ANANT AMBANI  RADHIKA MERCHANT  QR Codes Colour Coded Wristbands  USE OF TECH AT AMBANI WEDDING
ಅಂಬಾನಿ ಕುಟುಂಬದ ವಿವಾಹ ಮಹೋತ್ಸವ (ANI)

By ETV Bharat Karnataka Team

Published : Jul 15, 2024, 5:15 PM IST

ಮುಂಬೈ (ಮಹಾರಾಷ್ಟ್ರ): ಏಷ್ಯಾದ ಶ್ರೀಮಂತ, ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಫಾರ್ಮಾ ದಿಗ್ಗಜ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಅವರ ವಿವಾಹ ಸಮಾರಂಭದ ವೈಭವ ಅದ್ಧೂರಿಯಾಗಿ ನಡೆಯಿತು. ಆದರೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಾಡಿದ ಭದ್ರತಾ ವ್ಯವಸ್ಥೆಗಳು ಸಹ ವಿಶಿಷ್ಟವಾದವು. ಕ್ಯೂಆರ್ ಕೋಡ್, ಕಲರ್ ಕೋಡೆಡ್ ರಿಸ್ಟ್‌ಬ್ಯಾಂಡ್‌ಗಳು ಮತ್ತು ಸ್ಟ್ಯಾಂಡ್-ಬೈ ವೈದ್ಯಕೀಯ ತಂಡಗಳಂತಹ ವ್ಯವಸ್ಥೆಗಳು ಮುನ್ನೆಚ್ಚರಿಕೆಯ ದೃಷ್ಟಿಯಿಂದ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿವೆ.

6 ಗಂಟೆಗಳ ಮುಂಚೆಯೇ ಕ್ಯೂಆರ್​ ಕೋಡ್​: ಮದುವೆಗೆ ಬಂದಿದ್ದ ರಾಜಕಾರಣಿಗಳು, ಧಾರ್ಮಿಕ ಗುರುಗಳು, ಚಲನಚಿತ್ರ ತಾರೆಯರು, ಕೈಗಾರಿಕೋದ್ಯಮಿಗಳು ಸೇರಿ ಎಲ್ಲ ಅತಿಥಿಗಳು ತಮ್ಮ ಕೈಯಲ್ಲಿ ಕಲರ್​ ಬ್ಯಾಂಡ್ ಹೊಂದಿದ್ದರು. ಭದ್ರತಾ ಕ್ಲಿಯರೆನ್ಸ್​ನ ಎಲ್ಲಾ ನಿಯಮಗಳನ್ನು ಅನುಸರಿಸಿದ ನಂತರವೇ ಸ್ಥಳಕ್ಕೆ ಪ್ರವೇಶಿಸಲು ಅತಿಥಿಗಳಿಗೆ ಅನುಮತಿ ನೀಡಲಾಯಿತು.

ಶನಿವಾರ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅಂಬಾನಿ ಕುಟುಂಬ ಆಯೋಜಿಸಿದ್ದ 'ಶುಭ ಆಶೀರ್ವಾದ' ಸಮಾರಂಭದಲ್ಲಿ ವಧು-ವರರನ್ನು ಆಶೀರ್ವದಿಸಲು ಪ್ರಧಾನಿ ನರೇಂದ್ರ ಮೋದಿ ಕೂಡ ಆಗಮಿಸಿದ್ದರು. ಬಹುಹಂತದ ಭದ್ರತೆಯ ಅಡಿಯಲ್ಲಿ, ಎಲ್ಲಾ ಅತಿಥಿಗಳಿಗೆ ಡ್ರೆಸ್ ಕೋಡ್ ಸೇರಿದಂತೆ ಕೆಲವು ಮಾರ್ಗಸೂಚಿಗಳ ಜೊತೆಗೆ ಅತ್ಯಂತ ದುಬಾರಿ ಮತ್ತು ಐಷಾರಾಮಿ ಆಮಂತ್ರಣ ಕಾರ್ಡ್‌ಗಳನ್ನು ಕಳುಹಿಸಲಾಗಿತ್ತು. ಇದರ ಜೊತೆ ರೆಡ್​ ಬಾಕ್ಸ್​ ಅನ್ನು ನೀಡಿದ್ದರು. ಅದರೊಳಗೆ ಚಿಕ್ಕ ಬೆಳ್ಳಿಯ ದೇವಾಲಯ, ದುರ್ಗಾ ದೇವಿ, ಗಣೇಶ, ರಾಧಾ-ಕೃಷ್ಣ ಸೇರಿದಂತೆ ವಿವಿಧ ಹಿಂದೂ ದೇವತೆಗಳ ಚಿನ್ನದ ವಿಗ್ರಹಗಳನ್ನು ಒಳಗೊಂಡಿದೆ ಎಂದು ತಿಳಿದುಬಂದಿದೆ.

ಅತಿಥಿಗಳು ತಮ್ಮ ಆಗಮನವನ್ನು ಇ-ಮೇಲ್ ಅಥವಾ ಗೂಗಲ್ ಫಾರ್ಮ್ ಮೂಲಕ ದೃಢೀಕರಿಸಬೇಕಾಗಿತ್ತು. "ನಾವು ನಿಮ್ಮ RSVP ಅನ್ನು ಸ್ವೀಕರಿಸಿದ್ದೇವೆ ಮತ್ತು ನಿಮ್ಮನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇವೆ. ಈವೆಂಟ್‌ಗೆ ಕೇವಲ ಆರು ಗಂಟೆಗಳ ಮೊದಲು QR ಕೋಡ್‌ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗುತ್ತದೆ" ಎಂಬ ಸಂದೇಶವನ್ನು ಸ್ವೀಕರಿಸಿದ್ದರು. ಇದಾದ ನಂತರ, ಈ ಕ್ಯೂಆರ್ ಕೋಡ್ ಅನ್ನು ಮೊಬೈಲ್‌ನಲ್ಲಿ ಸಂದೇಶದ ಮೂಲಕ ಕಳುಹಿಸಲಾಗಿತ್ತು. ಅತಿಥಿಗಳ ಇ-ಮೇಲ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಸ್ಥಳಕ್ಕೆ ಪ್ರವೇಶವನ್ನು ಪಡೆದರು. ಆದರೆ ಅದಕ್ಕೂ ಮೊದಲು, ಸಮಾರಂಭದ ವಿವಿಧ ಪ್ರದೇಶಗಳಿಗೆ ಪ್ರವೇಶವನ್ನು ಅನುಮತಿಸಲು ಅವರ ಕೈಗಳಿಗೆ ವಿವಿಧ ಬಣ್ಣಗಳ ಬ್ಯಾಂಡ್​ಗಳನ್ನು ಕಟ್ಟಲಾಗಿತ್ತು.

ವಿವಾಹ ಸಮಾರಂಭದ ದಿನವಾದ ಶುಕ್ರವಾರ, ಅನೇಕ ಚಲನಚಿತ್ರ ತಾರೆಯರು, ಕ್ರಿಕೆಟಿಗರು ಮತ್ತು ಕೊರಿಯಾದ ಎಲೆಕ್ಟ್ರಾನಿಕ್ಸ್ ಕಂಪನಿ ಸ್ಯಾಮ್‌ಸಂಗ್‌ನ ಮಾಲೀಕ ಲೀ-ಜೇ ಯೋಂಗ್ ಮತ್ತು ಅವರ ಪತ್ನಿಯ ಕೈ ಮೇಲೆ ಗುಲಾಬಿ ಬ್ಯಾಂಡ್‌ಗಳು ಕಾಣಿಸಿಕೊಂಡಿದ್ದವು. ಅಂತೆಯೇ, ನೌಕರರು, ಭದ್ರತಾ ಸಿಬ್ಬಂದಿ, ಸೇವಾ ಸಿಬ್ಬಂದಿಗೆ ವಿವಿಧ ಬಣ್ಣದ ಬ್ಯಾಂಡ್‌ಗಳನ್ನು ಧರಿಸಿದ್ದರು. ಮದುವೆ ಸಮಾರಂಭಗಳ ಅದ್ಧೂರಿ ವ್ಯವಸ್ಥೆಗಳ ಜೊತೆಗೆ ವೈದ್ಯರನ್ನೊಳಗೊಂಡ ವೈದ್ಯಕೀಯ ತಂಡ ಮತ್ತು ಅಗ್ನಿಶಾಮಕ ದಳವೂ ಉಪಸ್ಥಿತವಿತ್ತು.

ಸಿಕ್ಕಿಬಿದ್ದ ಆಹ್ವಾನಿಸದ ಅತಿಥಿಗಳು:ಅಂಬಾನಿ ಕುಟುಂಬ ಭದ್ರತೆ ವಿಷಯದಲ್ಲಿ ಯಾವುದೇ ಅವಕಾಶಗಳನ್ನು ತೆಗೆದುಕೊಳ್ಳಲು ಬಯಸಲಿಲ್ಲ. ಅದಕ್ಕಾಗಿಯೇ ಕ್ಯೂಆರ್ ಕೋಡ್‌ಗಳನ್ನು ಕೆಲವೇ ಗಂಟೆಗಳ ಮುಂಚಿತವಾಗಿ ಕಳುಹಿಸಲಾಗಿತ್ತು. ಏಕೆಂದರೆ ಅಂಬಾನಿ ಕುಟುಂಬದ ಹಿಂದಿನ ಮದುವೆಗಳಲ್ಲಿ ಕೆಲವರು ಆ ಕೋಡ್‌ಗಳನ್ನು ಆಹ್ವಾನಿಸದವರಿಗೆ ಮಾರಾಟ ಮಾಡಿದ್ದರು. ಹೀಗಾಗಿ ಈ ವೇಳೆ ಮದುವೆ ಸಮಾರಂಭದ ಆರು ಗಂಟೆಗಳ ಮುಂಚೇ ಕ್ಯೂಆರ್​ ಕೋಡ್​ಗಳನ್ನು ಕಳುಹಿಸಲಾಗಿತ್ತು.

ಇನ್ನೂ ಈ ವೇಳೆ ಅನಂತ್-ರಾಧಿಕಾ ಮದುವೆಗೆ ಆಹ್ವಾನ ನೀಡದೆ ಆಗಮಿಸಿದ್ದ ಪ್ರಭಾವಿ ಸೇರಿದಂತೆ ಇಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ವ್ಯಕ್ತಿಗಳಲ್ಲಿ ಒಬ್ಬರು ಯೂಟ್ಯೂಬರ್ ವೆಂಕಟೇಶ್ ನರಸಯ್ಯ ಉಳ್ಳೂರಿ (26) ಮತ್ತು ಇನ್ನೊಬ್ಬರು ಆರೋಪಿತ ಉದ್ಯಮಿ ಲುಕ್ಮಾನ್ ಮೊಹಮ್ಮದ್ ಶಾಫಿ ಶೇಖ್ (28). ಪೊಲೀಸರು ಇಬ್ಬರ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಿಬ್ಬರೂ ಆಂಧ್ರಪ್ರದೇಶದಿಂದ ಆಹ್ವಾನವಿಲ್ಲದೆ ಮದುವೆಗೆ ಬಂದಿದ್ದರು. ಪೊಲೀಸರು ನೋಟಿಸ್ ನೀಡಿ ಇಬ್ಬರನ್ನೂ ಬಿಡುಗಡೆ ಮಾಡಿದ್ದಾರೆ.

ನವದಂಪತಿಗೆ ಆಶೀರ್ವದಿಸಿದ ಮೋದಿ:ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ 'ಶುಭ ಆಶೀರ್ವಾದ' ಸಮಾರಂಭ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿ ನವದಂಪತಿಗೆ ಆಶೀರ್ವದಿಸಿದರು. ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮತ್ತು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಹ ಕಾಣಿಸಿಕೊಂಡಿದ್ದಾರೆ.

ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಚಿತ್ರ ತಾರೆಯರು:ಸಾವಿರಾರು ಕೋಟಿ ರೂ. ಖರ್ಚು ಮಾಡಿ ಆಯೋಜಿಸಿರುವ ಈ ಮದುವೆ ಕಾರ್ಯಕ್ರಮ ಇಡೀ ಜಗತ್ತಿನ ಗಮನ ಸೆಳೆದಿದೆ. ಸಮಾರಂಭಕ್ಕೆ ಜಾಗತಿಕ ಮಟ್ಟದ ಸೆಲೆಬ್ರಿಟಿಗಳು, ರಾಜಕಾರಣಿಗಳು, ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದ ಗಣ್ಯರು, ಅಗ್ರ ಕ್ರಿಕೆಟಿಗರು ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತನಾಮರು ಸಾಕ್ಷಿಯಾಗಿದ್ದರು. ಈವೆಂಟ್​ಗೆ ಜಾಗತಿಕ ಮಟ್ಟದ ಗಣ್ಯ ವ್ಯಕ್ತಿಗಳು ಆಗಮಿಸಿ ಗಮನ ಸೆಳೆದಿದ್ದಾರೆ.

ಕಿಮ್ ಕಾರ್ಡಶಿಯಾನ್, ಖ್ಲೋಯೆ ಕಾರ್ಡಶಿಯಾನ್, ನೈಜೀರಿಯಾದ ರ‍್ಯಾಪರ್ ರೆಮಾ, ಯುಕೆ ಮಾಜಿ ಪ್ರಧಾನಿ ಟೋನಿ ಬ್ಲೈರ್ ಮತ್ತು ಸೌದಿ ಅರಾಮ್ಕೊ ಸಿಇಓ ಅಮೀನ್ ನಾಸರ್, ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಜಯ್ ಲೀ ಮತ್ತು ಜಿಎಸ್‌ಕೆ (GSK plc) ಸಿಇಓ ಎಮ್ಮಾ ವಾಲ್​ಮ್ಸ್ಲೇ, ಜಾನ್ ಸೀನಾ, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.

ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಅಜಯ್ ದೇವಗನ್, ರಣ್​​ಬೀರ್ ಕಪೂರ್, ಆಲಿಯಾ ಭಟ್, ರೇಖಾ, ಟೈಗರ್ ಶ್ರಾಫ್ ಫ್ಯಾಮಿಲಿ, ವರುಣ್ ಧವನ್, ಕತ್ರಿನಾ ಕೈಫ್ - ವಿಕ್ಕಿ ಕೌಶಲ್, ದೀಪಿಕಾ ಪಡುಕೋಣೆ - ರಣ್​ವೀರ್​ ಸಿಂಗ್​​, ಸಲ್ಮಾನ್ ಖಾನ್ ಮತ್ತು ದಕ್ಷಿಣದ ಸೂಪರ್‌ಸ್ಟಾರ್‌ಗಳಾದ ರಜನಿಕಾಂತ್, ರಾಮ್ ಚರಣ್, ಮಹೇಶ್ ಬಾಬು, ಯಶ್ ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಜೂನ್​ 29ರಂದೇ ಅಂಬಾನಿ ಮನೆಯಲ್ಲಿ ಕಾರ್ಯಕ್ರಮಗಳು ಆರಂಭವಾಗಿವೆ. ಜುಲೈ 13 'ಶುಭ್ ಆಶೀರ್ವಾದ್' ಮತ್ತು ಜುಲೈ 14 'ಮಂಗಲ್ ಉತ್ಸವ' ಅಥವಾ ಮದುವೆಯ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಮದುವೆಗೂ ಮುನ್ನ ಎರಡು ವೈಭವೋಪೇತ ಪ್ರೀ ವೆಡ್ಡಿಂಗ್​ ಕಾರ್ಯಕ್ರಮಗಳು ನಡೆದಿವೆ. ಜಾಮ್‌ನಗರದಲ್ಲಿ ಸೆಲೆಬ್ರಿಟಿಗಳು, ಕ್ರಿಕೆಟರ್ಸ್, ಗ್ಲೋಬಲ್​ ಐಕಾನ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಒಳಗೊಂಡು ವರ್ಣರಂಜಿತ ವಿವಾಹ ಪೂರ್ವ ಕಾರ್ಯಕ್ರಮ ನಡೆದಿತ್ತು. ನಂತರ ಐಷಾರಾಮಿ ಕ್ರೂಸ್​​​ನಲ್ಲಿ ಪ್ರೀ ವೆಡ್ಡಿಂಗ್​ ಪಾರ್ಟಿ ನಡೆಯಿತು. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಅಂಬಾನಿ ಪ್ರೋಗ್ರಾಮ್​ನ ಫೋಟೋ - ವಿಡಿಯೋಗಳು ಸದ್ದು ಮಾಡುತ್ತಿವೆ.

ಓದಿ:ಅನಂತ್ ಅಂಬಾನಿ ಮದುವೆಗೆ ಆಗಮಿಸಿದ ಬಾಲಿವುಡ್​ ನಟರಿಗೆ ಕೋಟಿ ಬೆಲೆಯ ವಾಚ್​​​​​ ಉಡುಗೊರೆ! - AMBANI GIFTS WATCH

ABOUT THE AUTHOR

...view details