'ಬ್ಲ್ಯಾಕ್' ಸಿನಿಮಾ ತೆರೆಗಪ್ಪಳಿಸಿ ಇಂದಿಗೆ 19 ವರ್ಷಗಳಾಗಿವೆ. 2005ರ ಫೆಬ್ರವರಿ 4ರಂದು ತೆರೆಕಂಡಿದ್ದ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಮುಖ್ಯಭೂಮಿಕೆಯ ಬ್ಲ್ಯಾಕ್ ಸಿನಿಮಾ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದೆ. ಇಂದಿಗೂ ಅಮಿತಾಭ್ ಬಚ್ಚನ್ ಮತ್ತು ರಾಣಿ ಮುಖರ್ಜಿ ಅವರ ಅಮೋಘ ಅಭಿನಯದ ಚಿತ್ರವಾಗಿ ಗುರುತಿಸಿಕೊಂಡಿದೆ. ಗಮನಾರ್ಹ ಸಂಗತಿಯೆಂದರೆ, ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಬಿಗ್ ಬಿ ಒಂದು ಪೈಸೆ ಕೂಡ ತೆಗೆದುಕೊಂಡಿಲ್ಲವಂತೆ.
ತಮ್ಮ ಅಧಿಕೃತ ಎಕ್ಸ್ ಪೇಜ್‌ನಲ್ಲಿ ಅಮಿತಾಭ್ ಬಚ್ಚನ್ ಚಿತ್ರದ ಟ್ರೇಲರ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ, "ಬ್ಲ್ಯಾಕ್ ಬಿಡುಗಡೆಯಾಗಿ 19 ವರ್ಷಗಳಾಗಿವೆ. ಇಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರೀಮಿಯರ್ ಆಗಿದ್ದು, ಚಿತ್ರದ ಚೊಚ್ಚಲ ಡಿಜಿಟಲ್ ಬಿಡುಗಡೆಯನ್ನು ಆಚರಿಸುತ್ತಿದ್ದೇವೆ. ದೇಬ್ರಾಜ್ ಮತ್ತು ಮಿಚೆಲ್ ಅವರ ಪ್ರಯಾಣ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಇದು ನಿಮಗೆ ಶಕ್ತಿ ತುಂಬುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಬರೆದುಕೊಂಡಿದ್ದಾರೆ.
'ಬ್ಲ್ಯಾಕ್' ಹೆಲೆನ್ ಕೆಲ್ಲರ್ ಅವರ ಜೀವನದಿಂದ ಸ್ಫೂರ್ತಿ ಪಡೆದಿರುವ ಚಿತ್ರ. ರಾಣಿ ಮುಖರ್ಜಿ ವಿಶೇಷ ಚೇತನ (ಕಣ್ಣು ಕಾಣದ, ಕಿವಿ ಕೇಳದ) ಮಹಿಳೆಯಾಗಿ ನಟಿಸಿದ್ದಾರೆ. ಬಚ್ಚನ್ ಅವರ ಶಿಕ್ಷಕ ದೇಬ್ರಾಜ್ ಸಹೈ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರಕ್ಕಾಗಿ, ಬಿಗ್ ಬಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (ಎರಡನೇ ರಾಷ್ಟ್ರ ಪ್ರಶಸ್ತಿ) ಪಡೆದರು. ಅಲ್ಲದೇ ಈ ಸಿನಿಮಾ ಹಿಂದಿ ಭಾಷೆಯಲ್ಲಿ ಬೆಸ್ಟ್ ಫೀಚರ್ ಫಿಲ್ಮ್ ಮತ್ತು ಕಾಸ್ಟೂಮ್ ಡಿಸೈನ್ ವಿಭಾಗದಲ್ಲಿ ಪ್ರಶಸ್ತಿ ಸೇರಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು.
ಬಚ್ಚನ್ ಅವರನ್ನು ಲೀಡ್ ರೋಲ್ನಲ್ಲಿ ನಟನೆ ಮಾಡಿಸಲು ಬನ್ಸಾಲಿ ಎಷ್ಟು ಒತ್ತಾಯಿಸುತ್ತಿದ್ದರು ಎಂಬುದು ಈಗಾಗಲೇ ಹಲವು ಸಂದರ್ಶನಗಳಲ್ಲಿ ಗೊತ್ತಾಗಿದೆ. ಹಿಂದಿನ ಸಂದರ್ಶನದಲ್ಲಿ, ಈ ಸಿನಿಮಾಗೆ ಬಚ್ಚನ್ ಅವರ ಅಪಾರ ಕೊಡುಗೆಗಳನ್ನು ಒಪ್ಪಿಕೊಂಡರು. ಒಂದು ವೇಳೆ ಬಿಗ್ ಬಿ ಈ ಚಿತ್ರವನ್ನು ತಿರಸ್ಕರಿಸಿದ್ದರೆ ಬ್ಲ್ಯಾಕ್ ಎಂದಿಗೂ ನಿರ್ಮಾಣವಾಗುತ್ತಿರಲಿಲ್ಲ ಎಂಬರ್ಥದಲ್ಲಿ ನಿರ್ದೇಶಕರು ಹೇಳಿಕೊಂಡಿದ್ದಾರೆ. ಅದೇ ಸಂದರ್ಶನದಲ್ಲಿ, 'ಉಚಿತವಾಗಿ ಕೆಲಸ ಮಾಡುತ್ತಿದ್ದರೂ ಕೂಡ ಬಿಗ್ ಬಿ ಅವರ ಬದ್ಧತೆಯು ಈ ಯೋಜನೆ ಮೇಲಿನ ಅವರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ' ಎಂದೂ ಸಹ ತಿಳಿಸಿದ್ದರು. ಬಿಗ್ ಬಿ ಜೊತೆ ಮತ್ತೆ ಕೈಜೋಡಿಸಲು ಬನ್ಸಾಲಿ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಆದ್ರೆ 'ಬ್ಲ್ಯಾಕ್' ಸಿನಿಮಾಗೆ ಹೊಂದಿಕೆಯಾಗುವ ಅಥವಾ ಅದನ್ನು ಮೀರಿಸುವ ಯೋಜನೆಯನ್ನು ಸೃಷ್ಟಿಸುವುದು ಕಷ್ಟ ಎಂದೂ ಕೂಡ ಬನ್ಸಾಲಿ ಒಪ್ಪಿಕೊಂಡಿದ್ದಾರೆ.