ದಕ್ಷಿಣ ಚಿತ್ರರಂಗದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಅವರ ಮುಂದಿನ ಬಹುನಿರೀಕ್ಷಿ ಸಿನಿಮಾ 'ಪುಷ್ಪ 2'. 2021ರ ಡಿಸೆಂಬರ್ 17ರಂದು ತೆರೆಕಂಡ ಈ ಚಿತ್ರದ ಮೂಲಕ ಅಲ್ಲು ಅರ್ಜುನ್ ಅವರ ಜನಪ್ರಿಯತೆ, ಬೇಡಿಕೆ ದುಪ್ಪಟ್ಟಾಯಿತು. ಇದೇ ಸಿನಿಮಾ ಮೂಲಕ ಅವರು ಕೇಂದ್ರ ಸರ್ಕಾರ ಕೊಡಮಾಡುವ ಪ್ರತಿಷ್ಟಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡರು. ಈ ಹಿನ್ನೆಲೆಯಲ್ಲಿ ನಟನ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಸೀಕ್ವೆಲ್ ಬಿಡುಗಡೆಗೂ ಮುನ್ನ ಪಾರ್ಟ್ 3ರ ಸುದ್ದಿ ಸದ್ದು ಮಾಡುತ್ತಿರುವ ಈ ಹೊತ್ತಿನಲ್ಲಿ, ಮತ್ತೊಂದು ಕುತೂಹಲಕಾರಿ ವಿಚಾರ ಹೊರಬಿದ್ದಿದೆ.
ಹೌದು, ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಪುತ್ರ ಅಲ್ಲು ಅಯಾನ್ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆಂಬ ಗುಸುಗುಸು ಇದೆ. ಇದೇ ಪುಷ್ಪ ಸೀಕ್ವೆಲ್ನಲ್ಲಿ ಅಲ್ಲು ಅಯಾನ್ ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಚಿತ್ರತಂಡದಿಂದ ಅಧಿಕೃತ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಈಗಾಗಲೇ ಪುತ್ರಿ ಅಲ್ಲು ಅರ್ಹಾ, ಸಮಂತಾ ರುತ್ ಪ್ರಭು ನಟನೆಯ 'ಶಾಕುಂತಲಂ' ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ ಅಯಾನ್ ಕೂಡ ಚಿತ್ರರಂಗ ಪ್ರವೇಶಿಸಲು ಸಜ್ಜಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಇದಕ್ಕಾಗಿ ತಂದೆ ಹಾಗು ನಾಯಕ ನಟ ಸೂಪರ್ ಪ್ಲ್ಯಾನ್ ಕೂಡಾ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಲ್ಲು ಅಯಾನ್ ಈಗಾಗಲೇ ಮಾಡೆಲ್ ಆಗಿ ಕ್ರೇಜ್ ಗಳಿಸುತ್ತಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ಅವರ ಡಂಕಿ ಸಿನಿಮಾದ ಲುಟ್ ಪುಟ್ ಗಯಾ ಹಾಡನ್ನು ಹಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲು ಅರ್ಜುನ್ ತಮ್ಮ ಪುತ್ರನ ಜನಪ್ರಿಯತೆ ನೋಡಿ ಸಿನಿಮಾಗೆ ಪ್ರವೇಶ ಕೊಡಿಸಲು ಯೋಚಿಸುತ್ತಿದ್ದಾರೆ. ಇದಕ್ಕಾಗಿ ಪುಷ್ಪ 2 ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನೂ ಸಿದ್ಧಪಡಿಸಲಾಗುತ್ತಿದೆಯಂತೆ. ಚಿತ್ರದಲ್ಲಿ ಅಯಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿ ಬರುತ್ತಿವೆ. ಇದು ನಿಜವಾಗಿದ್ದರೆ ಒಳ್ಳೆಯದು ಎಂಬುದು ಫ್ಯಾನ್ಸ್ ಆಶಯ. ಅಧಿಕೃತ ಮಾಹಿತಿಯನ್ನು ಚಿತ್ರತಂಡ ಇನ್ನಷ್ಟೇ ಕೊಡಬೇಕಿದ್ದು, ಸಿನಿಪ್ರಿಯರು ಕಾತರರಾಗಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಗರಿ ಗರಿ ದೋಸೆ, ಫಿಲ್ಟರ್ ಕಾಫಿ ಸವಿದು ಸಂಭ್ರಮಿಸಿದ ನಟ ಕಾರ್ತಿಕ್ ಆರ್ಯನ್
'ಪುಷ್ಪ: ದಿ ರೂಲ್' ಶೂಟಿಂಗ್ ಶರವೇಗದಲ್ಲಿ ಸಾಗಿದೆ. ಸದ್ಯ ಚಿತ್ರದ ಪ್ರಮುಖ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಸುಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸುಕುಮಾರ್ ರೈಟಿಂಗ್ಸ್ ಸಹಯೋಗದಲ್ಲಿ ಮೈತ್ರಿ ಮೂವಿ ಮೇಕರ್ಸ್ ಈ ಬಹುನಿರೀಕ್ಷಿತ ಚಿತ್ರ ನಿರ್ಮಿಸುತ್ತಿದೆ. ದೇವಿ ಶ್ರೀಪ್ರಸಾದ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸಿನಿಮಾದಲ್ಲಿ ಫಹಾದ್ ಫಾಜಿಲ್, ರಶ್ಮಿಕಾ ಮಂದಣ್ಣ, ಧನಂಜಯ, ಸುನೀಲ್, ಅನಸೂಯಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ:ರಾಮ್ ಚರಣ್ ಮುಖ್ಯಭೂಮಿಕೆಯ 'ಗೇಮ್ ಚೇಂಜರ್' ಅಪ್ಡೇಟ್ಸ್