ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಇತ್ತೀಚೆಗೆ ವಿಶ್ವ ಪ್ರಸಿದ್ಧ ಫ್ಯಾಷನ್ ಈವೆಂಟ್ 'ಮೆಟ್ ಗಾಲಾ 2024'ರಲ್ಲಿ ಮ್ಯಾಜಿಕ್ ಮಾಡಿ ಬಂದಿದ್ದಾರೆ. ಜಗತ್ತಿನ ಗಣ್ಯಾತಿಗಣ್ಯ ಸೆಲೆಬ್ರಿಟಿಗಳು ಒಂದೇ ವೇದಿಕೆಯಲ್ಲಿ ಸೇರಿ, ಫ್ಯಾಶನ್ ಪ್ರದರ್ಶಿಸುವ ಜನಪ್ರಿಯ ಕಾರ್ಯಕ್ರಮವಿದು. ಇಲ್ಲಿ ರಾಷ್ಟ್ರಪ್ರಶಸ್ತಿ ವಿಜೇತೆ ಆಲಿಯಾ ಭಟ್ ಗ್ಲ್ಯಾಮರಸ್ ಲುಕ್ ಬಿಟ್ಟು ದೇಸಿ ಲುಕ್ನಲ್ಲಿ ಕಾಣಿಸಿಕೊಂಡು ಸಖತ್ ಸದ್ದು ಮಾಡಿದ್ದರು.
ಮೆಟ್ ಗಾಲಾ 2024ರಲ್ಲಿ ಅತ್ಯಂತ ಖ್ಯಾತಿ ಪಡೆದ ತಾರೆಯರಲ್ಲಿ ಆಲಿಯಾ ಭಟ್ ಕೂಡ ಒಬ್ಬರು ಎಂಬುದು ಗಮನಾರ್ಹ. ಆದ್ರೆ, ಆಲಿಯಾ ಭಟ್ ಅವರ ಹೆಸರನ್ನು 'ಬ್ಲಾಕ್‌ಔಟ್ 2024' ಪಟ್ಟಿಯಲ್ಲಿ ನೋಂದಾಯಿಸಲಾಗಿದೆ. ಈವೆಂಟ್‌ನಲ್ಲಿ ವಿಶ್ವದ ಜ್ವಲಂತ ಸಮಸ್ಯೆ ಬಗ್ಗೆ ಮೌನ ವಹಿಸಿದ್ದಕ್ಕಾಗಿ ಆಲಿಯಾ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಹಲವು ವಿದೇಶಿ ತಾರೆಯರ ಹೆಸರೂ ಕೂಡ ಸೇರಿದೆ.
ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಕೆಲ ವಿಶ್ವಪ್ರಸಿದ್ಧ ತಾರೆಯರು ಯಾವುದೇ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆ ಕಳೆದ ಕೆಲ ತಿಂಗಳುಗಳಿಂದ ಚರ್ಚೆ ನಡೆಯುತ್ತಿದೆ. ಮೆಟ್ ಗಾಲಾ 2024ರ ನಂತರ, ಈ ಸಮಸ್ಯೆ ಇನ್ನಷ್ಟು ಸದ್ದು ಮಾಡಿದೆ. ಜನರು ಎಕ್ಸ್ನಲ್ಲಿ ನಿರ್ಬಂಧಿಸಲಾದ ಕೆಲ ಸೆಲೆಬ್ರಿಟಿಗಳ ಪಟ್ಟಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಹಿಷ್ಕಾರ ಅಥವಾ ಬ್ಲಾಕಿಂಗ್ ಅಭಿಯಾನವು, ವಿಶ್ವ ಪ್ರಸಿದ್ಧ ವ್ಯಕ್ತಿಗಳು ಶಾಂತಿಗಾಗಿ ಕರೆ ಕೊಡಲು ತಮ್ಮ ದೊಡ್ಡ ವೇದಿಕೆಗಳನ್ನು ಬಳಸಲು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಆದರೆ, ಆಲಿಯಾ ಭಟ್ ಸೇರಿದಂತೆ ವಿಶ್ವ ಪ್ರಸಿದ್ಧ ತಾರೆಗಳು ಈ ವಿಷಯದ ಬಗ್ಗೆ ಮೌನವಹಿಸಿರೋದು ಆಕ್ರೋಶಕ್ಕೆ ಕಾರಣವಾಗಿದೆ.
ಈ ಬ್ಲಾಕ್‌ಔಟ್ 2024 ಪಟ್ಟಿಯಲ್ಲಿ, ಆಲಿಯಾ ಭಟ್, ಕಿಮ್ ಕಾರ್ಡಶಿಯಾನ್, ವಿಶ್ವದ ಪ್ರಸಿದ್ಧ ಗಾಯಕ ಟೇಲರ್ ಸ್ವಿಫ್ಟ್, ಬೆಯೋನ್ಸ್, ಕೈಲಿ ಜೆನ್ನರ್, ಝೆಂಡಾಯಾ, ಮಿಲಿ ಸೈರಸ್, ಸೆಲೆನಾ ಗೊಮೆಜ್, ಕೈಲಿ ಕಾರ್ಡಶಿಯಾನ್, ಅರೆನಾ ಗ್ರಾಂಡೆ, ಡೋಜಾ ಕ್ಯಾಟ್, ಡೆಮಿ ಲೊವಾಟೊ, ಲಿಝೋ, ನಿಕ್ಕಿ ಮಿನಾಜ್, ಟ್ರಾವಿಸ್ ಸ್ಕಾಟ್, ಕೇಟಿ ಪೆರ್ರಿ, ಝಾಕ್ ಎಫ್ರಾನ್, ಜೋ ಜೋನಾಸ್, ಕೆವಿನ್ ಜೊನಾಸ್ ಮತ್ತು ಜಸ್ಟಿನ್ ಟಿಂಬರ್ಲೇಕ್ ಸೇರಿದಂತೆ ಹಲವು ತಾರೆಯರ ಹೆಸರುಗಳನ್ನು ಸೇರಿಸಲಾಗಿದೆ.