ಇಂದು ಪ್ರೇಮಿಗಳ ದಿನ. ಬಹುತೇಕ ಸೆಲೆಬ್ರಿಟಿಗಳು ಬಹಳ ವಿಶೇಷವಾಗಿ ವ್ಯಾಲೆಂಟೈನ್ಸ್ ಡೇ ವಿಶಸ್ ತಿಳಿಸಿದ್ದಾರೆ. ಆದ್ರೆ ಬಾಲಿವುಡ್ ಕಲಾವಿದರಾದ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಸ್ಟಂಟ್ ಫೋಟೋ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಅಕ್ಕಿ ಮತ್ತು ಶ್ರಾಫ್, ತಮ್ಮ ಅವಿನಾಭಾವ ಸ್ನೇಹ ಸಂಬಂಧವನ್ನು ಪ್ರದರ್ಶಿಸುವ ಮೂಲಕ ಪ್ರೇಮಿಗಳ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದಾರೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ 'ಬಡೇ ಮಿಯಾನ್ ಛೋಟೆ ಮಿಯಾನ್' ಸಹ-ನಟರು ವಿಶೇಷ ವ್ಯಾಲೆಂಟೈನ್ಸ್ ಡೇ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 'ಬ್ರೊಮ್ಯಾನ್ಸ್ ಓವರ್ ರೊಮಾನ್ಸ್' ಎಂದು ಬರೆದುಕೊಂಡಿದ್ದಾರೆ.
ಮೊದಲ ಫೋಟೋ ಈ ತಾರೆಯರ ನಿಕಟ ಸ್ನೇಹ ಸಂಬಂಧವನ್ನು ಪ್ರದರ್ಶಿಸಿದೆ. ಇಬ್ಬರೂ ಪರಸ್ಪರ ಕೈ(ಹಸ್ತ)ಯನ್ನು ಬಿಗಿಯಾಗಿ ಹಿಡಿದಿದ್ದಾರೆ. ಎರಡನೇ ಚಿತ್ರದಲ್ಲಿ, ಅಕ್ಷಯ್ ಕುಮಾರ್ ಸಮುದ್ರತೀರದಲ್ಲಿ ಟೈಗರ್ ಶ್ರಾಫ್ ಅವರನ್ನು ಎತ್ತಿ ಹಿಡಿದಿರುವುದನ್ನು ಕಾಣಬಹುದು. ಫೋಟೋಗಳನ್ನು ಹಂಚಿಕೊಂಡಿರುವ ಅಕ್ಷಯ್, ಟೈಗರ್, "ಈ ಪ್ರೇಮಿಗಳ ದಿನದಂದು ಬ್ರೊಮ್ಯಾನ್ಸ್ ಓವರ್ ರೊಮ್ಯಾನ್ಸ್" ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಟೈಗರ್ ಶ್ರಾಫ್ ಅವರು ಬಡೇ ಮಿಯಾನ್ ಛೋಟೆ ಮಿಯಾನ್ ಶೂಟಿಂಗ್ ಸೆಟ್ನಿಂದ 'ಖಿಲಾಡಿ' ಅಕ್ಷಯ್ ಕುಮಾರ್ ಅವರನ್ನೊಳಗೊಂಡ ತೆರೆಮರೆಯ ಫೋಟೋವನ್ನು ಹಂಚಿಕೊಂಡಿದ್ದರು. ಹೆಲಿಕಾಪ್ಟರ್ನ ಹಿನ್ನೆಲೆಯಲ್ಲಿ ಇಬ್ಬರೂ ಗನ್ ಹಿಡಿದು ನಿಂತಿದ್ದರು. ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ಧರಿಸಿರುವುದನ್ನು ನೋಡಿದ್ರೆ ಆ್ಯಕ್ಷನ್ ಸೀನ್ಗಳ ತೀವ್ರತೆ ಸ್ಪಷ್ಟವಾಗಿ ಗಮನಕ್ಕೆ ಬರುತ್ತದೆ. ಫೋಟೋ ಹಂಚಿಕೊಂಡ ಶ್ರಾಫ್, "ಖಿಲಾಡಿ + ಬಾಘಿ = 2 ಮ್ಯಾನ್ ಆರ್ಮಿ #ಬಡೇ ಮಿಯಾನ್ ಛೋಟೆ ಮಿಯಾನ್" ಎಂದು ಕ್ಯಾಪ್ಷನ್ ಕೊಟ್ಟಿದ್ದರು.