'ಮೆರವಣಿಗೆ' ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಂಗಾಳಿ ಬೆಡಗಿ ಐಂದ್ರಿತಾ ರೇ ಅವರೀಗ ಕರ್ನಾಟದ ಸೊಸೆ. ದಿಗಂತ್, ಶಿವರಾಜ್ಕುಮಾರ್, ಸುದೀಪ್, ಪುನೀತ್ ರಾಜ್ಕುಮಾರ್, ದುನಿಯಾ ವಿಜಯ್ ಅವರಂತಹ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ಐಂದ್ರಿತಾ ರೇ ಮದುವೆ ಬಳಿಕ ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದಾರೆ. ಏಕೆ ಸಿನಿಮಾ ಮಾಡುತ್ತಿಲ್ಲ? ಸೇರಿದಂತೆ ಕೆಲ ಪ್ರಶ್ನೆಗಳಿಗೆ ಈಟಿವಿ ಭಾರತ ಜೊತೆ ಬಂಗಾಳಿ ಬೆಡಗಿ ಉತ್ತರಿಸಿದ್ದಾರೆ.
ಸಿನಿಮಾ ಏಕೆ ಮಾಡುತ್ತಿಲ್ಲ?:ಸ್ಯಾಂಡಲ್ವುಡ್ನ ದೂದ್ಪೇಡಾ ಖ್ಯಾತಿಯ ದಿಗಂತ್ ಮಂಚಾಲೆ ಅವರೊಂದಿಗೆ 2018ರಲ್ಲಿ ದಾಂಪತ್ಯ ಜೀವನ ಆರಂಭಿಸಿ ಖುಷಿಯ ಕ್ಷಣಗಳಲ್ಲಿ ತೇಲುತ್ತಿರುವ ನಟಿ ಐಂದ್ರಿತಾ ರೇ, ''ನಾನು ಮದುವೆ ಆದ್ಮೇಲೆ ಮನೆ ಕೆಲಸ ಮಾಡುತ್ತಿದ್ದೇನೆ'' ಎಂದು ಮಾತು ಶುರು ಮಾಡಿದ್ರು. ನಂತರ, ''ಇಲ್ಲ ಇಲ್ಲ, ಹಾಗೇನು ಇಲ್ಲ. ನಾನು ಮದುವೆಗೂ ಮುಂಚೆ ಒಂದು ಹಿಂದಿ ಸಿನಿಮಾ ಹಾಗೂ ವೆಬ್ ಸೀರಿಸ್ ಮಾಡಿದ್ದೆ. ಮದುವೆ ಬಳಿಕ ಒಳ್ಳೆ ಸ್ಕ್ರಿಪ್ಟ್ ಸಿಕ್ಕಿಲ್ಲ. ಕನ್ನಡದಲ್ಲಿ ಒಳ್ಳೆ ಸಿನಿಮಾಗಳನ್ನು ಮಾಡಬೇಕೆಂಬ ಆಸೆಯಿದೆ. ಆದರೆ ಒಳ್ಳೆ ಸ್ಕ್ರಿಪ್ಟ್ಗಳು ಬರುತ್ತಿಲ್ಲ. ಅದಕ್ಕೆ ನಾನು ಸಿನಿಮಾ ಮಾಡುತ್ತಿಲ್ಲ. ಆದ್ರೆ ದಿಗಂತ್ ಅವರು ಮನೆಯಲ್ಲಿ ಸುಮ್ನನೇ ಕೂರಬೇಡ, ಏನಾದ್ರು ಮಾಡು ಎಂದು ಹೇಳುತ್ತಿರುತ್ತಾರೆ. ನಾನು ನನ್ನ ಮನೆಯ ಶ್ವಾನಗಳ ಜೊತೆ ಹೆಚ್ಚು ಸಮಯ ಕಳೆಯಲು ಇಚ್ಛಿಸುತ್ತೇನೆ. ಕಂಟೆಂಟ್ ಇರುವ ಸ್ಕ್ರಿಪ್ಟ್ ಸಿಕ್ಕಾಗ ಸಿನಿಮಾ ಮಾಡುತ್ತೇನೆ'' ಎಂದು ತಿಳಿಸಿದರು.
ವೈವಾಹಿಕ ಜೀವನ ಹೇಗಿದೆ?:ದಿಗಂತ್ ಜೊತೆ ನನ್ನ ಜೀವನ ತುಂಬಾನೇ ಚೆನ್ನಾಗಿದೆ. ನಾನು ಅಡ್ವೆಂಚರ್ಸ್ ಕಲಿತಿದ್ದು ದಿಗಂತ್ ಅವರಿಂದಲೇ. ನಮ್ಮ ಜೊತೆ ನಮ್ಮಿಷ್ಟದ ನಾಯಿಗಳನ್ನು ಕರೆದುಕೊಂಡು ಹೋಗುತ್ತಿರುತ್ತೇವೆ. ಒಮ್ಮೆ ಆ್ಯನಿವರ್ಸರಿ ಪ್ಲ್ಯಾನ್ ಏನು ಎಂದು ಕೇಳಿದಾಗ, ಬಾ ಸರ್ಫಿಂಗ್ ಕಲಿಯೋಕ್ಕೆ ಹೋಗೋಣ ಅಂತಾ ಹೇಳಿದ್ರು. ಆಗ ನಾನು ಕೂಡಾ ಓಕೆ ಅಂದೆ. ಅವರ ಜೊತೆ ಸರ್ಫಿಂಗ್ ಅನ್ನು ಸಖತ್ ಎಂಜಾಯ್ ಮಾಡಿದ್ದೆ. ನನಗೆ ಜಿಮ್ಗೆ ಹೋಗೋದಂದ್ರೆ ಇಷ್ಟ. ದಿಗಂತ್ ಜೊತೆ ಜಿಮ್, ಸೈಕ್ಲಿಂಗ್ಗೆ ಹೋಗುತ್ತಿರುತ್ತೇನೆ. ಜೊತೆಗೆ ಬೀದಿ ನಾಯಿಗಳನ್ನು ರಕ್ಷಣೆ ಮಾಡುತ್ತಾ ಬಹಳ ಖುಷಿಯಾಗಿದ್ದೇನೆ ಎಂದು ತಿಳಿಸಿದರು.
ಯಾವ ರೀತಿಯ ಸಿನಿಮಾ ಮಾಡಬೇಕು? ;ಈಗಾಗ್ಲೇ ಬಬ್ಲೀ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದೀರ. ಎಂಥ ಪಾತ್ರಗಳಲ್ಲಿ ಕಾಣಿಸಿಕೊಳ್ಲಬೇಕೆಂಬ ಆಸೆಯಿದೆ ಎಂಬ ಪ್ರಶ್ನೆ ನಟಿಗೆ ಎದುರಾಯಿತು. ಅದಕ್ಕೆ ''ನಾನು ಹೆಚ್ಚು ಕಮರ್ಷಿಯಲ್ ಸಿನಿಮಾಗಳನ್ನು ಮಾಡಿ ಸಕ್ಸಸ್ ಕಂಡಿದ್ದೇನೆ. ಕಮರ್ಷಿಯಲ್ ಚಿತ್ರಗಳಲ್ಲಿ ಎಲ್ಲಾ ರೀತಿಯ ಎಲಿಮೆಂಟ್ಸ್ ಇರುತ್ತದೆ. ಹಾಗಾಗಿ ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕು'' ಎಂದುಕೊಂಡಿದ್ದೇನೆ ಎಂದು ತಿಳಿಸಿದರು.
ಕನ್ನಡ ಕಲಿತಿದ್ದೇಗೆ?:ಮೊದಲು ಬಂಗಾಳಿಯನ್ನು ಹೆಚ್ಚಾಗಿ ಮಾತನಾಡುತ್ತಿದ್ದೆ, ಹಾಗಾಗಿ ಕನ್ನಡ ಮಾತನಾಡಲು ಸ್ವಲ್ಪ ಕಷ್ಟ ಆಗುತ್ತಿತ್ತು. ಕನ್ನಡ ಕಲಿಯಲು ದಿಗಂತ್ ಹಾಗೂ ನನ್ನ ಅತ್ತೆ ಮಾವ, ದಿಗಂತ್ ಅಜ್ಜಿ ಸಹಾಯ ಮಾಡಿದರು. ಈಗ ಪರವಾಗಿಲ್ಲ. ಕನ್ನಡವನ್ನು ಚೆನ್ನಾಗಿ ಮಾತನಾಡುತ್ತೇನೆ. 40ಕ್ಕೂ ಹೆಚ್ಚು ಕನ್ನಡ ಸಿನಿಮಾಗಳನ್ನು ಮಾಡಿದ್ದೇನೆ. ಸಿನಿಮಾಗಳಿಂದಲೂ ಕನ್ನಡ ಕಲಿಯಲು ಸಾಧ್ಯವಾಯಿತು ಎಂದು ತಿಳಿಸಿದರು.