ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಡಿ ನಟ ದರ್ಶನ್ ಜೈಲು ಸೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲ ನಟ ನಟಿಯರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದೀಗ 'ಚಂದ್ರಮುಖಿ ಪ್ರಾಣಸಖಿ' ಸಿನಿಮಾ ಖ್ಯಾತಿಯ ಭಾವನಾ ರಾಮಣ್ಣ ಅವರು ದರ್ಶನ್ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ.
ಭಗವಾನ್ ಹಾಗೂ ಚಿಂಗಾರಿ ಸಿನಿಮಾದಲ್ಲಿ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡಿರುವ ಭಾವನಾ ರಾಮಣ್ಣ ಈಟಿವಿ ಭಾರತದ ಜೊತೆ ಮಾತನಾಡಿ, ''ನನಗೆ ದರ್ಶನ್ ಏನು ಅನ್ನೋದು ಗೊತ್ತು. ಆದರೆ ದರ್ಶನ್ ಮಾಡಿರೋ ತಪ್ಪಿನ ಬಗ್ಗೆ ನೋಡಲು ಕಾನೂನು ಇದೆ. ದರ್ಶನ್ ತಪ್ಪು ಮಾಡಿದ್ದಾರೋ? ಇಲ್ಲವೋ? ಎಂದು ತೀರ್ಮಾನಿಸಲು ನ್ಯಾಯಾಂಗ ವ್ಯವಸ್ಥೆ ಇದೆ. ದರ್ಶನ್ ಹೀರೋ ಆಗುವುದಕ್ಕಿಂತ ಮಂಚೆಯೇ ನನಗೆ ಗೊತ್ತು. ನಾನು ನೋಡಿರುವ ಹಾಗೇ ಅವರು ನಾಚಿಕೆ ಸ್ವಭಾವದ ವ್ಯಕ್ತಿ. ಸಂತೋಷದಲ್ಲಿ ಜೊತೆಗಿದ್ದು, ಕಷ್ಟದಲ್ಲಿದ್ದಾಗ ಅವರ ಜೊತೆಗಿಲ್ಲ ಅಂದ್ರೆ ಹೇಗೆ?. ಒಂದು ಕುಟುಂಬ ಎಂದು ಬಂದಾಗ ಎಲ್ಲರ ಮನೆ ದೋಸೆ ತೂತು'' ಎಂದು ತಿಳಿಸಿದರು.
ಸೋಶಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಸಮಸ್ಯೆಗಳು ಆಗುತ್ತಿವೆ. ಕೆಲ ಪ್ರಕರಣಗಳಷ್ಟೇ ಹೊರ ಬರುತ್ತಿವೆ. ಹೆಣ್ಮು ಮಕ್ಕಳಿಗೆ ಕೆಟ್ಟ ಸಂದೇಶ ರವಾನೆ ಆಗಿ, ಬಹಳ ಸಮಸ್ಯೆ ಆಗುತ್ತದೆ. ಆದರೆ ರೇಣುಕಾಸ್ವಾಮಿ ಘಟನೆ ತುಂಬಾ ನೋವಾಗಿದೆ. ಕೃತ್ಯ ನಡೆದಿದೆ ನಿಜ, ಅದು ಕಾನೂನಿನ ಅಡಿಯಲ್ಲಿ ತನಿಖೆ ಆಗುತ್ತಿದೆ. ಪವಿತ್ರಾ ಗೌಡ ಅವರಿಗೆ ಯಾವ ರೀತಿ ಅಶ್ಲೀಲ ಮೆಸೇಜ್ ಬಂದಿದೆಯೆಂಬುದು ನನಗೆ ಗೊತ್ತು. ಕೆಟ್ಟ ಮೆಸೇಜ್ ಮಾಡಲು ಅವರ್ಯಾರು?. ರೇಣುಕಾಸ್ವಾಮಿ ದರ್ಶನ್ ಅಭಿಮಾನಿ ಅಂತಾ ಹೇಳ್ತೀರಾ. ನಿಮಗೇಗೆ ಗೊತ್ತು?. ಕೆಲ ಸೋಷಿಯಲ್ ಮೀಡಿಯಾ ಮೆಸೇಜ್ ನೋಡಿದ್ರೆ, ಕೆಲ ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾರೆ. ಕೆಟ್ಟ ಮೆಸೇಜ್ ಬಂದಿದ್ದನ್ನು ಇಗ್ನೋರ್ ಮಾಡಲು ಆಗಲ್ಲ. ರೇಣುಕಾಸ್ವಾಮಿ ಯಾರು ಎಂಬುದು ನಮಗೂ ನಿಮಗೂ ಯಾರಿಗೂ ಗೊತ್ತಿಲ್ಲ. ಈ ಪ್ರಕರಣದಿಂದ ಚಿತ್ರರಂಗ ಮಂಕಾಗಿದೆ ಎಂದು ಭಾವನಾ ತಿಳಿಸಿದರು.