ಚೆನ್ನೈ(ತಮಿಳುನಾಡು): ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರದ ಶೀರ್ಷಿಕೆ ಇತ್ತೀಚೆಗಷ್ಟೇ ಬಹಿರಂಗಗೊಂಡಿದೆ. 'ಕೂಲಿ' ಎಂಬ ಕುತೂಹಲಕಾರಿ ಶೀರ್ಷಿಕೆಯುಳ್ಳ ಸಿನಿಮಾ ಸುತ್ತಲಿನ ಕುತೂಹಲ ಬೆಟ್ಟದಷ್ಟಿದೆ. ಇತ್ತೀಚೆಗೆ ಅನಾವರಣಗೊಂಡ ಟೈಟಲ್ ಪ್ರೋಮೋ, ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನದ ಚಿತ್ರದ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟುಗೊಳಿಸಿದೆ. ಈಗಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಉತ್ಸಾಹ ಹುಟ್ಟುಹಾಕಿದೆ. ಅದಾಗ್ಯೂ, ಸಂಗೀತ ಸಂಯೋಜಕ ಇಳಯರಾಜ ಅವರ ಒಪ್ಪಿಗೆಯಿಲ್ಲದೇ ಪ್ರೋಮೋದಲ್ಲಿ ವಾ ವಾ ಪಕ್ಕಂ ವಾ ಹಾಡನ್ನು ಬಳಸಿದ ಹಿನ್ನೆಲೆ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪ ಕೇಳಿಬಂದಿದ್ದು, ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿದೆ.
ಇತ್ತೀಚೆಗೆ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಾಯಕ ನಟ ರಜನಿಕಾಂತ್ ಈ ವಿಷಯವನ್ನು ಪ್ರಸ್ತಾಪಿಸಿದರು. ಇದು ನಿರ್ಮಾಪಕ ಮತ್ತು ಸಂಗೀತ ಸಂಯೋಜಕರ ನಡುವಿನ ವಿಷಯ ಎಂದು ಜಾಣ್ಮೆಯಿಂದ ಉತ್ತರಿಸಿದರು. ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂಬುದಾಗಿ ಸಲಹೆ ನೀಡಿದರು. ಇಳಯರಾಜ ಅವರು, ತಮ್ಮ ಒಪ್ಪಿಗೆ ಪಡೆಯದೇ ಸಂಗೀತ ಬಳಸಿದ ಹಿನ್ನೆಲೆ ಚಲನಚಿತ್ರನಿರ್ಮಾಣ ಸಂಸ್ಥೆಗೆ ಕಾಪಿರೈಟ್ ನೋಟಿಸ್ ಜಾರಿ ಮಾಡಿದ ಹಿನ್ನೆಲೆ 'ಕೂಲಿ' ತಂಡ ಸದ್ಯ ಕಾನೂನು ತೊಡಕು ಎದುರಿಸುತ್ತಿದೆ.
ಸೂಕ್ತವಾಗಿ ಅನುಮತಿ ಪಡೆಯಬೇಕು, ಇಲ್ಲವೇ ಪ್ರೋಮೋದಿಂದ ಹಾಡನ್ನು ತೆಗೆದುಹಾಕಬೇಕು ಎಂದು ಇಳಯರಾಜ ಒತ್ತಾಯಿಸಿದ್ದಾರೆ. ಈ ಕ್ರಮದಲ್ಲಿ ವಿಫಲವಾದರೆ ಕಾನೂನು ಕ್ರಮ ಎದುರಾಗಬಹುದು ಎಂದು ಕೂಡ ಎಚ್ಚರಿಸಿದ್ದಾರೆ.
ಈ ಅಡೆತಡೆಗಳ ಹೊರತಾಗಿಯೂ ಅನಿರುದ್ಧ್ ರವಿಚಂದರ್ ಅವರ ಸಂಗೀತದೊಂದಿಗೆ ಜೂನ್‌ನಲ್ಲಿ 'ಕೂಲಿ' ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ತಾರಾಗಣ ಮತ್ತು ಸಿಬ್ಬಂದಿ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. 2025ರಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸನ್ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ