ಅಕ್ಟೋಬರ್ 29, 2021. ಕರುನಾಡಿಗೆ ಬರಸಿಡಿಲು ಬಡಿದ ದಿನ. ಚಿತ್ರರಂಗದಲ್ಲಿ ಕತ್ತಲು ಆವರಿಸಿದ ಕ್ಷಣ. ಇಡೀ ಕರ್ನಾಟಕವೇ ಕಣ್ಣೀರಿಟ್ಟ ಸನ್ನೀವೇಶ ಬಹುಶಃ ಈಗಲೂ ಬಹುತೇಕರ ಕಣ್ಣ ಮುಂದೆ ಬರುತ್ತದೆ. ಪವರ್ ಸ್ಟಾರ್, ಯುವರತ್ನ, ನಗುಮೊಗದ ಒಡೆಯ, ಚಂದನವನದ ರಾಜಕುಮಾರ.. ಹೀಗೆ ಸಾಕಷ್ಟು ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ಪುನೀತ್ ರಾಜ್ಕುಮಾರ್ ಕೊನೆ ಬಾರಿ ಉಸಿರಾಡಿದ ದಿನವದು. ಆದ್ರೆ ಅವರ ನೆನಪು ಮಾತ್ರ ಇಂದಿಗೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೇ ಉಳಿದಿದೆ. ಇಂದು ಅವರ ಮೂರನೇ ಪುಣ್ಯಸ್ಮರಣೆ ನಡೆಯುತ್ತಿದೆ.
ಕಡಿಮೆ ಸಂಖ್ಯೆಯ ಸಿನಿಮಾಗಳ ಮೂಲಕವೇ ಇಡೀ ಭಾರತೀಯ ಚಿತ್ರರಂಗದ ಮನಗೆದ್ದಿದ್ದ 'ಬೆಟ್ಟದ ಹೂ' ಹಠಾತ್ ಹೃದಯಾಘಾತದಿಂದ ಮುದುಡಿತು. ಭವಿಷ್ಯದಲ್ಲಿ ಉಜ್ವಲಿಸಬೇಕಿದ್ದ ನಟ ಸಾರ್ವಭೌಮನ ಅಂಜನೀಪುತ್ರ ವಿಧಿಯಾಟದ ಮುಂದೆ ಮಿಂಚಿ ಮರೆಯಾಯಿತು. ಕಂಠೀರವ ಸ್ಟೇಡಿಯಂನಲ್ಲಿರಿಸಿದ ಅಪ್ಪು ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಅಕ್ಟೋಬರ್ 29 ಮತ್ತು 30ರಂದು ಜನಸಾಮಾಮ್ಯರು ಪಡೆದರು. ಸಾಗರೋಪಾದಿಯಲ್ಲಿ ಹರಿದು ಬಂದ ಕನ್ನಡಿಗರ ಸಂಖ್ಯೆಯೇ ಸೂಪರ್ ಸ್ಟಾರ್ ಸ್ಟಾರ್ಡಮ್ ಏನೇಂಬುದನ್ನು ಒತ್ತಿ ಹೇಳಿತ್ತು.
ಅಮೋಘ ಅಭಿನಯ ಮಾತ್ರವಲ್ಲದೇ ತಮ್ಮ ಸರಳತೆ, ನಗು ಮತ್ತು ಮಾನವೀಯ ಕಾರ್ಯಗಳಿಂದಲೂ ಅತಿ ಹೆಚ್ಚು ಜನಪ್ರಿಯರಾದವರಿವರು. ಅವರ ಸಾಮಾಜಿಕ ಕಾರ್ಯಗಳನ್ನು ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂದುವರಿಸಿದ್ದಾರೆ. ಅಭಿಮಾನಿಗಳು ಕೂಡಾ ಇಂದಿಗೂ ಅಪ್ಪು ಹೆಸರಲ್ಲಿ ಸಮಾಜ ಸೇವೆ ನಡೆಸುತ್ತಿದ್ದಾರೆ. ಇಂದು ಪುನೀತ್ ರಾಜ್ಕುಮಾರ್ ಅವರ ಮೂರನೇ ಪುಣ್ಯಸ್ಮರಣೆ ಹಿನ್ನೆಲೆ, ವಿವಿಧೆಡೆ ವಿವಿಧ ಪುಣ್ಯಕಾರ್ಯಗಳು ಜರುಗುತ್ತಿವೆ. ಅಪ್ಪುನನ್ನು ಸ್ಮರಿಸುವ ಕಾರ್ಯ ಮುಂದುವರಿದಿವೆ. ಈಗಾಗಲೇ ಹಲವೆಡೆ ಪುನೀತ್ ರಾಜ್ಕುಮಾರ್ ಹೆಸರಲ್ಲಿ ದೇಗುಲಗಳು ನಿರ್ಮಾಣಗೊಂಡಿವೆ. ಇದು ಅಭಿಮಾನಿಗಳ ಅಭಿಮಾನಕ್ಕೆ ಹಿಡಿದ ಕೈಗನ್ನಡಿ.