ಹೈದರಾಬಾದ್ (ತೆಲಂಗಾಣ): ಹೈದರಾಬಾದ್‌ನ ಮಾದಾಪುರ ಪ್ರದೇಶದಲ್ಲಿರುವ ತಮ್ಮ 'ಎನ್-ಕನ್ವೆನ್ಷನ್ ಸೆಂಟರ್' ಅನ್ನು ತೆರವುಗೊಳಿಸಿರುವುದರ ಕುರಿತು ಟಾಲಿವುಡ್ನ ಖ್ಯಾತ ನಟ ನಾಗಾರ್ಜುನ ಅಕ್ಕಿನೇನಿ ಪ್ರತಿಕ್ರಿಯಿಸಿದ್ದಾರೆ. ತುಮ್ಮಿಡಿಕುಂಟಾ ಕೆರೆಯ ಫುಲ್ ಟ್ಯಾಂಕ್ ಲೆವೆಲ್ (ಎಫ್‌ಟಿಎಲ್) ವ್ಯಾಪ್ತಿಯಲ್ಲಿ ಭೂಮಿ ಒತ್ತುವರಿ ಮಾಡಿಕೊಂಡು ಈ ಕಟ್ಟಡ ನಿರ್ಮಿಸಲಾಗಿದೆ ಎಂಬ ಆರೋಪಗಳಿವೆ. ಹೊಸ ರಾಜ್ಯ ಸರ್ಕಾರದ ಘಟಕವಾಗಿರೋ 'ಹೈದರಾಬಾದ್ ಡಿಸಾಸ್ಟರ್ ರೆಸ್ಪಾನ್ಸ್ ಮತ್ತು ಅಸೆಟ್ಸ್ ಮಾನಿಟರಿಂಗ್ ಆಂಡ್ ಪ್ರೊಟೆಕ್ಷನ್' (HYDRA) ಈ 'ಎನ್-ಕನ್ವೆನ್ಷನ್ ಸೆಂಟರ್' ಅನ್ನು ನೆಲಸಮ ಮಾಡಿದೆ.
ಇಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಜನಪ್ರಿಯ ನಟ ನಾಗಾರ್ಜುನ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರೂ ಸಹ ಎನ್-ಕನ್ವೆನ್ಷನ್ ಸೆಂಟರ್ ಅನ್ನು ಧ್ವಂಸಗೊಳಿಸಲಾಗಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ, ''ತಡೆಯಾಜ್ಞೆಗಳಿದ್ದರೂ, ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿದಿದ್ದರೂ ಅದಕ್ಕೆ ವಿರುದ್ಧವಾಗಿ ಎನ್ ಕನ್ವೆನ್ಷನ್ ಸೆಂಟರ್ ಅನ್ನು ಕಾನೂನುಬಾಹಿರ ರೀತಿಯಲ್ಲಿ ಕೆಡವಿರುವುದು ನೋವಾಗಿದೆ. ನನ್ನ ಪ್ರತಿಷ್ಠೆಯನ್ನು ರಕ್ಷಿಸಲು ಮತ್ತು ನಾವು ಕಾನೂನು ಉಲ್ಲಂಘಿಸಿ ಯಾವುದೇ ಕೆಲಸ ಮಾಡಿಲ್ಲ ಎಂಬುದನ್ನು ತಿಳಿಸಿಲು ಈ ಹೇಳಿಕೆ ನೀಡುವುದು ಸೂಕ್ತವೆನಿಸಿತು. ಇದು ಪಟ್ಟಾ ಭೂಮಿಯಾಗಿದೆ. ಒಂದು ಇಂಚು ಭೂಮಿಯನ್ನೂ ಅತಿಕ್ರಮಿಸಿಲ್ಲ ಅಥವಾ ಒತ್ತುವರಿ ಮಾಡಿಕೊಂಡಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಖಾಸಗಿ ಆಸ್ತಿ ನಿರ್ಮಾಣದ ಸುತ್ತಲಿರುವ ಆರೋಪಗಳನ್ನುದ್ದೇಶಿಸಿ ಮಾತನಾಡಿದ ಅವರು, ಕಾನೂನುಬಾಹಿರ ಕಟ್ಟಡ ಉರುಳಿಸುವಿಕೆಯ ನೋಟಿಸ್ ವಿರುದ್ಧ ನೀಡಲಾದ ಹಿಂದಿನ ತಡೆಯಾಜ್ಞೆಯನ್ನು ಉಲ್ಲೇಖಿಸಿದ್ದಾರೆ. ತಮ್ಮ ಟ್ವೀಟ್‌ನಲ್ಲಿ, "ಇಂದು ತಪ್ಪು ಮಾಹಿತಿ ಆಧಾರದ ಮೇಲೆ ಕಟ್ಟಡ ಧ್ವಂಸಗೊಳಿಸಲಾಗಿದೆ. ಇಂದು ಬೆಳಗ್ಗೆ ಕಟ್ಟಡ ನೆಲಸಮ ಮಾಡುವ ಮೊದಲು ಯಾವುದೇ ನೋಟಿಸ್ ನೀಡಲಾಗಿಲ್ಲ. ನಾನು ಕಾನೂನು ಪಾಲಿಸುವ ನಾಗರಿಕ. ನ್ಯಾಯಾಲಯಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ವಿರುದ್ಧ ನಿರ್ಧಾರ ಕೈಗೊಂಡಿದ್ದಾರೆ. ನಾನೇ ಕಟ್ಟಡ ಉರುಳಿಸುತ್ತಿದ್ದೆ" ಎಂದು ಅವರು ಬರೆದುಕೊಂಡಿದ್ದಾರೆ.