ಕೋಲ್ಕತ್ತಾ: ಭಾರತೀಯ ಚಿತ್ರರಂಗದ ಹಿರಿಯ ನಟ ಮಿಥುನ್ ಚಕ್ರವರ್ತಿ(73) ಅವರು ಶನಿವಾರ ಬೆಳಿಗ್ಗೆ ಅಸ್ವಸ್ಥಗೊಂಡಿದ್ದು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಇಲ್ಲಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆ ನೀಡಿರುವ ಮಾಹಿತಿ ಪ್ರಕಾರ, ಅವರು ಮೆದುಳಿನ ಸ್ಟ್ರೋಕ್ಗೆ (Ischemic Cerebrovascular Accident (Stroke) of the brain) ಒಳಗಾಗಿದ್ದಾರೆ. ಪ್ರಸ್ತುತ ಸಂಪೂರ್ಣ ಪ್ರಜ್ಞಾವಸ್ಥೆಯಲ್ಲಿದ್ದಾರೆ.
ಆಸ್ಪತ್ರೆಯಿಂದ ಮಾಹಿತಿ: ಮಿಥುನ್ ಚಕ್ರವರ್ತಿ ಅವರು ಬಲಗೈ ಮತ್ತು ಎಡಗಾಲಿನಲ್ಲಿ ದೌರ್ಬಲ್ಯ (Right upper & lower limbs) ಹೊಂದಿರುವುದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೆದುಳಿನ ಎಂಆರ್‌ಐ ಸೇರಿದಂತೆ ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಸ್ಟ್ರೋಕ್ಗೆ ಒಳಗಾಗಿರುವುದನ್ನು ಈ ಪರೀಕ್ಷೆಗಳು ದೃಢೀಕರಿಸಿವೆ. ಪ್ರಜ್ಞಾವಸ್ಥೆಯಲ್ಲಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಸೂಕ್ತ ಆಹಾರ ಕ್ರಮ ಪಾಲಿಸುತ್ತಿದ್ದಾರೆ. ನರ ವೈದ್ಯರು, ಹೃದ್ರೋಗ ತಜ್ಞರು ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್‌ಗಳು ಸೇರಿದಂತೆ ಪರಿಣತ ತಜ್ಞರು ನಿಗಾ ಇಟ್ಟಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
ನಟನ ಅನಾರೋಗ್ಯಗೊಂಡಿರುವ ಮಾಹಿತಿ ಹೊರಬಿದ್ದ ಕೂಡಲೇ ಚಿತ್ರರಂಗ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿ, ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದರು. ಪುತ್ರ ಮಿಮೋಹ್ ಚಕ್ರವರ್ತಿ ಮಾತನಾಡಿ, ತಂದೆ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದರು. ಇದು ರುಟೀನ್ ಚೆಕ್ಅಪ್ ಎಂದು ಹೇಳಿದ್ದರು. ಮಿಥುನ್ ಚಕ್ರವರ್ತಿ ಬಿಜೆಪಿ ನಾಯಕರೂ ಹೌದು.