ನಟನೆ ಜೊತೆಗೆ ನಿರ್ದೇಶನ ಮಾಡೋದು ಕನ್ನಡ ಚಿತ್ರರಂಗದಲ್ಲಿ ಹೊಸ ವಿಷಯವೇನಲ್ಲ. ಇತ್ತೀಚಿನ ವರ್ಷಗಳಲ್ಲಿ ದುನಿಯಾ ವಿಜಯ್, ಡಾರ್ಲಿಂಗ್ ಕೃಷ್ಣ, ಸೂರಜ್ ಗೌಡ ಸೇರಿದಂತೆ ಸಾಕಷ್ಟು ನಟರು, ನಿರ್ದೇಶನ ಮಾಡುವ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಕಿರುತೆರೆ ಹಾಗೂ ಬಿಗ್ ಸ್ಕ್ರೀನ್ನಲ್ಲಿ ತಮ್ಮದೇ ಆದ ವಿಭಿನ್ನ ಚಾರ್ಮ್ನಿಂದ ಗುರುತಿಸಿಕೊಂಡಿರುವ ಚಂದನ್ ಕುಮಾರ್ ಅವರೀಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.
ಚಂದನ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿದ್ದಾರೆ. 2014ರಲ್ಲಿ ತೆರೆಕಂಡ ಪರಿಣಯ ಸಿನಿಮಾ ಮೂಲಕ ಹೀರೋ ಆದ ಚಂದನ್ ಕುಮಾರ್, ಎರಡೊಂದ್ಲಾ ಮೂರು, ಲವ್ ಯೂ ಆಲಿಯಾ, ಪ್ರೇಮ ಬರಹ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯದ ಅನುಭವ ಹೊಂದಿದ್ದಾರೆ. ಇದೀಗ 'ಫ್ಲರ್ಟ್' ಶೀರ್ಷಿಕೆಯ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ.
ಬುಧವಾರದಂದು ಚಂದನ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಅವರು ನಿರ್ದೇಶನ ಮಾಡುತ್ತಿರುವ ಫ್ಲರ್ಟ್ ಚಿತ್ರದ ಒಂದು ಮೇಕಿಂಗ್ ವಿಡಿಯೋ ರಿವೀಲ್ ಆಗಿದೆ. ಚಂದನ್ ಅಭಿನಯಿಸುತ್ತಿರುವ 10ನೇ ಸಿನಿಮಾ ಇದು. ಅದಕ್ಕೆ ಚಂದನ್ ತಮ್ಮ ಚಿತ್ರಕ್ಕೆ ತಾವೇ ನಿರ್ದೇಶನ ಮಾಡಿಕೊಳ್ಳುವುದರ ಜೊತೆಗೆ ಎವರೆಸ್ಟ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.