ಅಂಬಿ ಮನೆಗೆ ಮೊಮ್ಮಗನ ಆಗಮನವಾಗಿದೆ. ಇದೇ ನವೆಂಬರ್ 12ರಂದು ನಟ ಅಭಿಷೇಕ್ ಅಂಬರೀಷ್ ಪತ್ನಿ ಅವಿವಾ ಬಿದ್ದಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದರು. ಪುತ್ರನ ಜನನದ ಬಳಿಕ ಇದೇ ಮೊದಲ ಬಾರಿಗೆ ಅಭಿಷೇಕ್ ಅಂಬರೀಷ್ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಸ್ಪೆಷಲ್ ಪೋಸ್ಟ್ಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ಅಭಿಷೇಕ್ ಅಂಬರೀಶ್ ಇಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಹಿನ್ನೆಲೆಯಲ್ಲಿ ತಂದೆ, ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ ಅಂಬರೀಶ್ ಅವರ ಫೋಟೋ ಇದೆ. ಜೊತೆಗೆ, ಫೋಟೋ ಮೇಲೆ ಇಟ್ಸ್ ಅ ಬಾಯ್, ಬೇಬಿ ರೆಬೆಲ್, 12.11.2024'' ಎಂದು ಬರೆಯಲಾಗಿದೆ. ಜೊತೆಗೆ, ಎರಡು ಪುಟ್ಟ ಹೆಜ್ಜೆಗಳು ಮತ್ತು ಹಾರ್ಟ್ ಸಿಂಬಲ್ ಅನ್ನು ಕಾಣಬಹುದು. ಈ ಫೋಟೋ ಜೊತೆಗಿರುವ ಕ್ಯಾಪ್ಷನ್ ಕೂಡಾ ಅಭಿಮಾನಿಗಳ ಗಮನ ಸೆಳೆದಿದೆ.
''ಎಲ್ಲರಿಗೂ ನಮಸ್ಕಾರ. ನವೆಂಬರ್ 12ರಂದು ನಮ್ಮ ಕುಟುಂಬಕ್ಕೆ ಅತೀವ ಸಂತಸದ ದಿನ. ರೆಬೆಲ್ ಸ್ಟಾರ್ ಅಂಬರೀಶ್ ಅಣ್ಣನ ಆಶೀರ್ವಾದ, ಗುರು-ಹಿರಿಯರ ಆಶೀರ್ವಾದದಿಂದ ಗಂಡು ಮಗು ಜನಿಸಿದ್ದು, ತಾಯಿ- ಮಗು ಆರೋಗ್ಯವಾಗಿದ್ದಾರೆಂದು ಈ ಮೂಲಕ ತಮ್ಮೆಲ್ಲರಿಗೂ ತಿಳಿಸಲು ಇಚ್ಛಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.
ರೆಬೆಲ್ ಸ್ಟಾರ್ ದಿ.ಅಂಬರೀಶ್ ಹಾಗೂ ಸುಮಲತಾ ದಂಪತಿಯ ಪುತ್ರ ಅಭಿಷೇಕ್ ಇತ್ತೀಚೆಗಷ್ಟೇ ತಂದೆಯಾಗಿ ಭಡ್ತಿ ಪಡೆದಿದ್ದಾರೆ. ಪತ್ನಿ ಅವಿವಾ ಬಿದ್ದಪ್ಪ ಕಳೆದ ಮಂಗಳವಾರ ಬೆಳಗ್ಗೆ 8.30ರ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಮ್ಮ ಮಗ ಇಬ್ಬರೂ ಆರೋಗ್ಯವಾಗಿದ್ದಾರೆ. ಸೆಪ್ಟೆಂಬರ್ ಆರಂಭದಲ್ಲಿ ಅಭಿಷೇಕ್ ಅಂಬರೀಶ್ ಅವರ ಜೆ.ಪಿ.ನಗರದ ನಿವಾಸದಲ್ಲಿ ಅವಿವಾ ಬಿದ್ದಪ್ಪ ಅವರ ಸೀಮಂತ ಶಾಸ್ತ್ರ ನೆರವೇರಿತ್ತು. ಈ ಸಮಾರಂಭಕ್ಕೆ ಆಪ್ತರು, ಸಿನಿ ಸ್ನೇಹಿತರು ಸಾಕ್ಷಿಯಾಗಿದ್ದರು.