ಇತ್ತಿಚೆಗಷ್ಟೇ ಅಂಬಿ ಮನೆಗೆ ಬೇಬಿ ರೆಬೆಲ್ ಆಗಮನವಾಗಿದೆ. ನವೆಂಬರ್ 12ರಮದು ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡರು. ಅಂಬಿ ಪುತ್ರ ತಂದೆಯಾಗಿ ಬಡ್ತಿ ಪಡೆದಿದ್ದು, ಇಂದು ರೆಬೆಲ್ ಲೇಡಿ ಸುಮಲತಾ ಅಂಬರೀಶ್ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ಸುಮಲತಾ ಅಂಬರೀಶ್ ಪೋಸ್ಟ್: ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಪೋಸ್ಟ್ ಶೇರ್ ಮಾಡಿರುವ ಮಾಜಿ ಸಂಸದೆ ಸುಮಲತಾ ಅಂಬರೀಶ್, ''ನಮಸ್ಕಾರ ಸ್ನೇಹಿತರೇ, ಒಂದು ಖುಷಿಯ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಿದೆ. ನವೆಂಬರ್ 12ರಂದು ನಮ್ಮ ಕುಟುಂಬಕ್ಕೆ ಅತ್ಯಂತ ಸಂತೋಷ ಹಾಗೂ ಅದೃಷ್ಟದ ದಿನ. ಈ ಶುಭ ದಿನದಂದು ದೇವರ ಕೃಪೆಯಿಂದ ನಮ್ಮ ಕುಟುಂಬಕ್ಕೆ ಗಂಡು ಮಗುವಿನ ಆಗಮನವಾಗಿದೆ. ಅಭಿ-ಅವಿವಾ ಈಗ ತಂದೆ-ತಾಯಿಯಾಗಿ, ನನಗೆ ಮೊಮ್ಮಗನ ಭಾಗ್ಯ ಒದಗಿಸಿಕೊಟ್ಟಿರುವುದು ಖುಷಿಯಾಗಿದೆ. ತಾಯಿ - ಮಗು ಆರೋಗ್ಯವಾಗಿದ್ದಾರೆ. ಈ ಸಂತೋಷದ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ'' ಎಂದು ಬರೆದುಕೊಂಡಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್, ಎಕ್ಸ್ ಅಕೌಂಟ್ಗಳಲ್ಲಿ ಹಂಚಿಕೊಂಡಿರುವ ಫೋಟೋ ಕನ್ನಡ ಚಿತ್ರರಂಗದ ದಿಗ್ಗಜ ನಟ ಅಂಬರೀಶ್ ಅವರನ್ನು ಒಳಗೊಂಡಿದೆ. ಸುಂದರ ಫೋಟೋದ ಮೇಲೆ ಇಟ್ಸ್ ಅ ಬಾಯ್, ಬೇಬಿ ರೆಬೆಲ್, 12.11.2024'' ಎಂದು ಬರೆಯಲಾಗಿದೆ. ಜೊತೆಗೆರಡು ಪುಟ್ಟ ಹೆಜ್ಜೆಗಳು ಮತ್ತು ಹಾರ್ಟ್ ಸಿಂಬಲ್ ಸಹ ಇದೆ. ಮಂಡ್ಯದ ಗಂಡು ಅಂಬಿ ಫೋಟೋ ಇರುವ ಹಿನ್ನೆಲೆ ಪೋಸ್ಟ್ ಹೆಚ್ಚಿನವರ ಗಮನ ಸೆಳೆದಿದೆ.