ದಕ್ಷಿಣ ಚಿತ್ರರಂಗದ ಹೆಸರಾಂತ ನಟ ದುಲ್ಕರ್ ಸಲ್ಮಾನ್ ಅವರಿಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೌತ್ ಸೂಪರ್ ಸ್ಟಾರ್ಗೆ ಕುಟುಂಬ ಸದಸ್ಯರು, ಸಿನಿ ಸ್ನೇಹಿತರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ನಟನ ವಿಶೇಷ ದಿನದಂದು ಅವರ ಮುಂದಿನ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಬಿಡುಗಡೆಯಾಗಿದೆ.
ವಿವಿಧ ಜಾನರ್ಗಳ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿರುವ ದುಲ್ಕರ್ ಅವರ ಮುಂದಿನ ಚಿತ್ರಗಳ ಅಪ್ಡೇಟ್ಸ್ಗಾಗಿ ಅಭಿಮಾನಿಗಳು ಕಾತರರಾಗಿದ್ದರು. ಅದರಂತೆ ಬಹುನಿರೀಕ್ಷಿತ ಚಿತ್ರಗಳ ಅಪ್ಡೇಟ್ಸ್ ಹೊರಬೀಳುತ್ತಿದೆ. ಪವನ್ ಸಾದಿನೇನಿ ನಿರ್ದೇಶನದ 'ಆಕಾಶಂ ಲೋ ಒಕ ತಾರಾ' (Aakasam lo Oka Tara) ಚಿತ್ರದಲ್ಲಿ ದುಲ್ಕರ್ ಕಾಣಿಸಿಕೊಳ್ಳಲಿದ್ದಾರೆ.
ಇಂದು ಜನ್ಮದಿನದ ಹಿನ್ನೆಲೆಯಲ್ಲಿ ಚಿತ್ರತಂಡ ಆಕರ್ಷಕ ಶೀರ್ಷಿಕೆಯೊಂದಿಗೆ ಕುತೂಹಲಕಾರಿ ಪೋಸ್ಟರ್ ಅನ್ನೂ ಬಿಡುಗಡೆ ಮಾಡಿ ವಿಶೇಷವಾಗಿ ಶುಭ ಕೋರಿದೆ. ನಾಯಕ ನಟ ನಾರ್ಮಲ್ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮೈದಾನದಲ್ಲಿ ಶಾಲಾ ಬಾಲಕಿಯೋರ್ವಳು ನಿಂತಿದ್ದಾಳೆ. ಮೇಲೆ ಆಕಾಶದ ಹಿನ್ನೆಲೆಯಲ್ಲಿ, ಸೂಪರ್ ಸ್ಟಾರ್ ದುಲ್ಕರ್ ಅವರ ಒಂದು ನೋಟ ಸಿಕ್ಕಿದೆ. ಶೀರ್ಷಿಕೆ ಮತ್ತು ಫಸ್ಟ್ ಲುಕ್ ಹಂಚಿಕೊಂಡ ಚಿತ್ರ ತಯಾರಕರು, 'ಸ್ಕೈ ಈಸ್ ನಾಟ್ ದಿ ಲಿಮಿಟ್, ಅದ್ಭುತ ಕಥೆಯೊಂದಿಗೆ ನಮ್ಮೆಲ್ಲರನ್ನು ಮೋಡಿಮಾಡುವ ನಮ್ಮ ಸ್ಟಾರ್ ದುಲ್ಕರ್ ಸಲ್ಮಾನ್ ಅವರಿಗೆ ಜನ್ಮದಿನದ ಶುಭಾಶಯಗಳು. ಸಿನಿಮಾಗೆ ಸಂಬಂಧಿಸಿದ ಹೆಚ್ಚಿನ ಅಪ್ಡೇಟ್ಸ್ ಅನ್ನು ಶೀಘ್ರದಲ್ಲೇ ಒದಗಿಸಲಿದ್ದೇವೆ' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್, 'ಆಕಾಶಂ ಲೋ ಒಕ ತಾರಾ' ಎಂಬ ಹ್ಯಾಶ್ಟ್ಯಾಗ್ ಅನ್ನು ಒಳಗೊಂಡಿದೆ.