ಗೋಟ್ ಲೈಫ್ ಎಂದು ಕರೆಯಲ್ಪಡುವ ಮಲಯಾಳಂ ಚಿತ್ರ 'ಆಡುಜೀವಿತಂ' ಬಾಕ್ಸ್ ಆಫೀಸ್ ವಿಚಾರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಬ್ಲೆಸ್ಸಿ ನಿರ್ದೇಶನದ ಈ ಚಿತ್ರದಲ್ಲಿ ಸೌತ್ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಗೋಟ್ ಲೈಫ್ ಬಿಡುಗಡೆಯಾದ ಕೇವಲ ಎಂಟು ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ. ಸಿನಿಮಾದ ಈ ಸಾಧನೆ ಮಲಯಾಳಂ ಚಿತ್ರರಂಗದಲ್ಲೇ ಹೊಸ ದಾಖಲೆ ನಿರ್ಮಿಸಿದ್ದು, 'ಮಂಜುಮ್ಮೆಲ್ ಬಾಯ್ಸ್ ' ಚಿತ್ರದ ದಾಖಲೆಯನ್ನು ಮುರಿದಿದೆ.
ನಾಯಕ ನಟ ಪೃಥ್ವಿರಾಜ್ ಸುಕುಮಾರನ್ ಅವರೇ ಈ ಸಾಧನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ, ಈ ಅಭೂತಪೂರ್ವ ಯಶಸ್ಸಿಗೆ ಸರ್ವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಚಿತ್ರ ಜಾಗತಿಕವಾಗಿ 100 ಕೋಟಿ ರೂಪಾಯಿ ಗಳಿಸಿದೆ ಎಂದು ತಿಳಿಸಿದ ನಟ ಅಪಾರ ಬೆಂಬಲಕ್ಕಾಗಿ ಸರ್ವರಿಗೂ ಧನ್ಯವಾದ ಅರ್ಪಿಸಿದ್ದಾರೆ. ಸೂಪರ್ ಸ್ಟಾರ್ ಶೇರ್ ಮಾಡಿದ ಪೋಸ್ಟ್ಗೆ ಅಭಿಮಾನಿಗಳು ಪ್ರತಿಕ್ರಿಯಿಸಿ, ಅಭಿನಂದನೆ ತಿಳಿಸಿದ್ದಾರೆ. ಈ ಸಾಧನೆ ಮಲಯಾಳಂ ಚಿತ್ರರಂಗದಲ್ಲಿ ಒಂದು ಪ್ರಮುಖ ಕ್ಷಣವೆಂದು ಕೊಂಡಾಡುತ್ತಿದ್ದಾರೆ.
'ಆಡುಜೀವಿತಂ' ಬಿಡುಗಡೆಯಾದ ಎಂಟನೇ ದಿನಕ್ಕೆ 100 ಕೋಟಿ ರೂ. ಕಲೆಕ್ಷನ್ನ ಮೈಲಿಗಲ್ಲನ್ನು ತಲುಪಿದರೆ, ಚಿದಂಬರಂ ನಿರ್ದೇಶನದ 'ಮಂಜುಮ್ಮೆಲ್ ಬಾಯ್ಸ್' ತನ್ನ ಒಂಬತ್ತನೇ ದಿನ ಈ ಸಾಧನೆ ಮಾಡಿತ್ತು. ಈ ಹಿಂದೆ, '2018: ಎವ್ರಿಒನ್ ಈಸ್ ಎ ಹೀರೋ' ಚಿತ್ರ ಕೂಡ ಜಾಗತಿಕವಾಗಿ ಶೀಘ್ರ 100 ಕೋಟಿ ಗಳಿಸಿದ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಗಮನಾರ್ಹ ವಿಚಾರವೆಂದರೆ ಈ ಮೂರೂ ಚಿತ್ರಗಳು ಜೀವನದ ಹೋರಾಟ ಎದುರಿಸಿ, ಬದುಕುಳಿಯುವ ಕಥೆಯನ್ನು ಆಧರಿಸಿದೆ.