ಬೆಂಗಳೂರು:15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗುರುವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಬಾರಿ ಬೆಂಗಳೂರು ಚಿತ್ರೋತ್ಸವಕ್ಕೆ ನಟ ಡಾಲಿ ಧನಂಜಯ್ ಅವರನ್ನು ರಾಯಭಾರಿಯಾಗಿ ಸರ್ಕಾರ ಘೋಷಿಸಿದೆ. ಡಾಲಿ ಅವರನ್ನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ನೇಮಕ ಮಾಡಿರುವುದು ಅವರ ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ ಖುಷಿ ತಂದಿದೆ.
ಗುರುವಾರ ವಿಧಾನಸೌಧದ ಮುಂಭಾಗದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ ನೀಡಿದರು. ಸಿಎಂ ಸಿದ್ದರಾಮಯ್ಯ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ್, ಸಾಧು ಕೋಕಿಲ, ಆರಾಧನಾ ಸೇರಿದಂತೆ ಅನೇಕ ಸಿನಿ ಗಣ್ಯರು ಉಪಸ್ಥಿತರಿದ್ದರು. ಈ ವೇಳೆ ಡಾಲಿ ಮಾತನಾಡಿ ಚಿತ್ರೋದ್ಯಮದ ಪರವಾಗಿ ಒಂದಿಷ್ಟು ಬೇಡಿಕೆಗಳನ್ನು ಸಿಎಂ ಮುಂದಿಟ್ಟರು.
"ಕೊರೊನಾ ಬಳಿಕ ಸಬ್ಸಿಡಿ ಹಾಗೂ ಪ್ರಶಸ್ತಿ ನೀಡುವುದನ್ನೂ ಕೂಡ ನಿಲ್ಲಿಸಲಾಗಿದೆ. ಕಲಾವಿದರಿಗೆ ಪ್ರೋತ್ಸಾಹ ಕೂಡ ತುಂಬಾ ಮುಖ್ಯ. ಕಾಂತಾರ, ಕೆಜಿಎಫ್ ಅಂತಹ ಸಿನಿಮಾಗಳು ಕನ್ನಡ ಸಿನಿಮಾರಂಗವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿವೆ. ಇದರ ಜೊತೆಗೆ ಸರ್ಕಾರದ ಪ್ರೋತ್ಸಾಹ ಕೂಡ ಬಹಳ ಮುಖ್ಯ. ಸದ್ಯ ನಿಂತಿರುವ ಪ್ರಶಸ್ತಿ ಮತ್ತು ಸಬ್ಸಿಡಿಯನ್ನು ಮುಂದುವರೆಸಬೇಕೆಂದು ಚಿತ್ರರಂಗದ ಪರವಾಗಿ ನಾನು ಸಿಎಂ ಬಳಿ ಕೇಳಿಕೊಳ್ಳುತ್ತಿದ್ದೇನೆ" ಎಂದು ಡಾಲಿ ಮನವಿ ಮಾಡಿದರು.