ಬೆಂಗಳೂರು:ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿ ನೀಟ್-2024 ಮತ್ತು ಯುಜಿ ಸಿಇಟಿ-2024 ಅಭ್ಯರ್ಥಿಗಳಿಗೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. ಉದ್ದೇಶಿತ ಪ್ರಕಟಣೆಗೂ ಎರಡು ದಿನ ಮುನ್ನವೇ ಫಲಿತಾಂಶ ಪ್ರಕಟಿಸಲಾಗಿದೆ. ಇದರೊಂದಿಗೆ, ಅಭ್ಯರ್ಥಿಗಳಿಗೆ 'ಚಾಯ್ಸ್' ಆಯ್ಕೆ ಪ್ರಕ್ರಿಯೆ ಆಗಸ್ಟ್ 31ರಿಂದ (ಶನಿವಾರ) ಆರಂಭವಾಗಲಿದೆ.
ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ, ಬಿಎಸ್ಸಿ (ನರ್ಸಿಂಗ್), ಯೋಗ ಮತ್ತು ನ್ಯಾಚುರೋಪತಿ ಮುಂತಾದ ಕೋರ್ಸ್ಗಳ ಅಭ್ಯರ್ಥಿಗಳಿಗೆ ಇದು ಅನ್ವಯವಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೋಷಕರ ಜೊತೆ ಚರ್ಚಿಸಿ ಸೂಕ್ತವಾದ 'ಚಾಯ್ಸ್' ಆಯ್ಕೆ ಮಾಡಿಕೊಳ್ಳಲು ಆಗಸ್ಟ್ 31ರ ಬೆಳಗ್ಗೆ 11ರಿಂದ ಸೆಪ್ಟೆಂಬರ್ 3ರವರೆಗೆ (ರಾತ್ರಿ 11.59) ಅವಕಾಶವಿದೆ. ಅಭ್ಯರ್ಥಿಗಳು ನಾಲ್ಕು ಚಾಯ್ಸ್ಗಳಲ್ಲಿ ತಮಗೆ ಸರಿ ಎನಿಸುವ ಯಾವುದಾದರೂ ಒಂದು ಚಾಯ್ಸ್ ಆಯ್ಕೆ ಮಾಡುವ ಮೊದಲು, ಅದಕ್ಕೆ ಸಂಬಂಧಿಸಿದ ವಿವರಣೆ ಓದಿ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಚಾಯ್ಸ್ 1 ಮತ್ತು ಚಾಯ್ಸ್ 2 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಆಗಸ್ಟ್ 31ರ ಮಧ್ಯಾಹ್ನ 1ರಿಂದ ಸೆಪ್ಟೆಂಬರ್ 4ರ ಸಂಜೆ 4 ಗಂಟೆ ಒಳಗೆ ಶುಲ್ಕ ಪಾವತಿಸಬೇಕು. ಚಾಯ್ಸ್ 1 ಆಯ್ಕೆ ಮಾಡಿಕೊಂಡು ಶುಲ್ಕ ಪಾವತಿಸಿದ ನೀಟ್ ಅಭ್ಯರ್ಥಿಗಳು ಮೂಲ ದಾಖಲೆಗಳು ಮತ್ತು ಎರಡು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳೊಂದಿಗೆ ಬೆಂಗಳೂರಿನಲ್ಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಖುದ್ದಾಗಿ ಸಲ್ಲಿಸಲು ಸೆಪ್ಟೆಂಬರ್ 2ರ ಬೆಳಗ್ಗೆ 10:30ರಿಂದ ಸೆಪ್ಟೆಂಬರ್ 4ರ ಸಂಜೆ 4 ಗಂಟೆ ವರೆಗೆ ಅವಕಾಶವಿದೆ. ಯಾವ ವರ್ಗದ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಸಲ್ಲಿಸಬೇಕು ಎಂಬುದನ್ನು ಸೂಚನೆ ಓದಿ ತಿಳಿದುಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಚಾಯ್ಸ್ 1 ಆಯ್ಕೆ ಮಾಡಿ ಶುಲ್ಕ ಪಾವತಿಸಿ ಮೂಲ ದಾಖಲೆಗಳನ್ನು ಸಲ್ಲಿಸಿದ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಸೆಪ್ಟೆಂಬರ್ 2ರಿಂದ ಸೆಪ್ಟೆಂಬರ್ 5ರೊಳಗೆ ಡೌನ್ಲೋಡ್ ಮಾಡಿಕೊಳ್ಳಬೇಕು. ಸೀಟು ಹಂಚಿಕೆಯಾದ ಕಾಲೇಜುಗಳಲ್ಲಿ ಸೆಪ್ಟೆಂಬರ್ 5ರ ಸಂಜೆ 5:30ಕ್ಕೆ ಮುಂಚೆ ಪ್ರವೇಶ ಪಡೆಯಬೇಕು. ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಮುಗಿಸುವ ಸಲುವಾಗಿ ಎಲ್ಲಾ ಶನಿವಾರ, ಭಾನುವಾರ ಹಾಗೂ ಗೆಜೆಟ್ ಪ್ರಕಟಿತ ರಜಾ ದಿನಗಳನ್ನು ಕೆಲಸದ ದಿನಗಳೆಂದು ಪರಿಗಣಿಸಲಾಗುವುದು ಎಂದು ಹೆಚ್. ಪ್ರಸನ್ನ ಹೇಳಿದ್ದಾರೆ.
ಎಂಜಿನಿಯರಿಂಗ್ ಪ್ರವೇಶ ಪಡೆಯುವ ಅಭ್ಯರ್ಥಿಗಳು ಮೂಲ ದಾಖಲೆಗಳ ಸಮೇತ ಸಂಬಂಧಪಟ್ಟ ಕಾಲೇಜುಗಳಿಗೆ ಹೋಗಿ ವರದಿ ಮಾಡಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್ ಸೈಟ್ ನೋಡಲು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಕೋರಿದ್ದಾರೆ.
ಇದನ್ನೂ ಓದಿ:ಬಿಲ್ ಬಂದ 30 ದಿನದೊಳಗೆ ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತ: ಬೆಸ್ಕಾಂ - Electricity Bill Payment