ಹೈದರಾಬಾದ್:ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ - 1ರ ಅಂತಿಮ ವೇಳಾಪಟ್ಟಿಯನ್ನ ಇತ್ತೀಚಿಗೆ ಪ್ರಕಟಿಸಿದ್ದು, 10ನೇ ತರಗತಿ ಪರೀಕ್ಷೆ ಮಾರ್ಚ್ 21 ರಿಂದ ಆರಂಭಗೊಂಡು ಏಪ್ರಿಲ್ 4 ಕ್ಕೆ ಅಂತ್ಯಗೊಳ್ಳಲಿದೆ. ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್ 1 ರಿಂದ ಪ್ರಾರಂಭಗೊಂಡು ಮಾರ್ಚ್ 20 ರಂದು ಅಂತ್ಯಗೊಳ್ಳಲಿದೆ. ಪರೀಕ್ಷೆಗೆ ಒಂದು ತಿಂಗಳು ಮಾತ್ರ ಬಾಕಿ ಇದೆ. ಈ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಒತ್ತಡ ಮತ್ತು ಆತಂಕದ ಭಾವನೆ ಮೂಡುವುದು ಸಹಜ. ಇದಕ್ಕೆ ಏಕೈಕ ಪರಿಹಾರ ಎಂದರೆ ಈಗ ಇರುವ ಸಮಯವನ್ನು ಸದುಪಯೋಗ ಪಡಿಸಿಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸುವುದು.
ಇನ್ನು ವಿದ್ಯಾರ್ಥಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿದ್ದರೆ ಮಾತ್ರ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಎನ್ನುತ್ತಾರೆ ತಜ್ಞರು. ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಎದುರಿಸಲು ಶಿಕ್ಷಕರು ನೀಡುವ ಸೂಚನೆಗಳನ್ನು ಪಾಲಿಸುವುದು ಮುಖ್ಯ ಎಂದು ಹೇಳಿದ್ದಾರೆ. ಪರೀಕ್ಷೆ ತಯಾರಿ ಬಗ್ಗೆ ಶಿಕ್ಷಕರು ನೀಡಿರುವ ಕೆಲ ಸಲಹೆ ಮತ್ತು ಸೂಚನೆಗಳು ಇಲ್ಲಿವೆ.
ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡಿರುವ ಸೂಚನೆಗಳು:
- ಸಿಲಬಸ್ ಅನ್ನು ಕ್ರಮ ಬದ್ಧವಾಗಿ ಓದುತ್ತಿದ್ದರೆ ವಿದ್ಯಾರ್ಥಿಗಳಲ್ಲಿ ಯಾವುದೇ ಆತಂಕ ಇರುವುದಿಲ್ಲ.
- ವಿದ್ಯಾರ್ಥಿಗಳು ಓದಿದ್ದನ್ನು ತಪ್ಪದೇ ಪ್ರತಿದಿನ ಬರೆದು ಅಭ್ಯಾಸ ಮಾಡಬೇಕು.
- ಪರೀಕ್ಷೆ ಎದುರಿಸಲು ಸರಿಯಾದ ಯೋಜನೆ ಮತ್ತು ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳುವುದು.
- ವಿದ್ಯಾರ್ಥಿಗಳು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು, ಪಠ್ಯಕ್ರಮದಲ್ಲಿನ ಪ್ರಮುಖ ಅಂಶಗಳು ಮತ್ತು ಪರೀಕ್ಷೆಗಳಲ್ಲಿ ಯಾವ ರೀತಿಯ ಪ್ರಶ್ನೆ ಬರಬಹುವುದು ಎಂಬುದನ್ನು ತಿಳಿದುಕೊಳ್ಳಬೇಕು. ಜೊತೆಗೆ ಯಾವ ಪಠ್ಯದಿಂದ ಎಷ್ಟು ಅಂಕಗಳ ಪ್ರಶ್ನೆಗಳು ಬರುತ್ತವೆ ಎಂಬುದನ್ನು ಅರಿತುಕೊಳ್ಳಬೇಕು.
- ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಬೇಕು. ಇದಿರಂದ ಈ ಹಿಂದೆ ಪ್ರಶ್ನೆಗಳನ್ನು ಯಾವ ರೀತಿ ಕೇಳಲಾಗಿದೆ ಎಂಬುದನ್ನು ತಿಳಿದು ಕೊಳ್ಳಬಹುದು.
- ನೀವು ಏಕಾಗ್ರತೆಯಿಂದ ಓದಲು ಯಾವ ಸಮಯ ಸೂಕ್ತ ಎಂದು ಅರಿತು, ಆ ಸಮಯದಲ್ಲಿ ಓದಲು ಪ್ರಾರಂಭಿಸಿ.
- ಒಂದು ದಿನದಲ್ಲಿ ಎಷ್ಟು ಸಿಲಬಸ್ ಓದಬೇಕು, ಒಂದು ವಾರದಲ್ಲಿ ಎಷ್ಟು ಸಿಲಬಸ್ ಪೂರ್ಣಗೊಳಿಸಬೇಕು ಎಂಬುದನ್ನು ಮೊದಲೇ ಗೊತ್ತುಪಡಿಸಿಕೊಂಡು ಓದಿದರೆ ಉತ್ತಮ ಫಲಿತಾಂಶ ಪಡೆಯಬಹುದು.
- ಓದುವಾಗ ಪ್ರತಿ ಗಂಟೆಗೆ 5 ರಿಂದ 10 ನಿಮಿಷ ವಿರಾಮ ತೆಗೆದುಕೊಂಡರೆ ದೇಹ ರಿಲ್ಯಾಕ್ಸ್ ಆಗುತ್ತದೆ ಮತ್ತು ಏಕಾಗ್ರತೆ ಹೆಚ್ಚುತ್ತದೆ.
- ಪಠ್ಯವನ್ನು ಓದಲು ಮತ್ತು ಅದನ್ನು ಮನನ ಮಾಡಿಕೊಳ್ಳಲು ಪ್ರತ್ಯೇಕವಾಗಿ ಸಮಯವನ್ನು ನಿಗದಿ ಪಡಿಸಿಕೊಳ್ಳಬೇಕು. ಓದುವಾಗ ಡೌಟ್ ಬಂದರೆ ತಕ್ಷಣ ಶಿಕ್ಷಕರು ಅಥವಾ ಸ್ನೇಹಿತರನ್ನು ಕೇಳಿ ತಿಳಿದುಕೊಳ್ಳಿ.
ಆರೋಗ್ಯದ ಬಗ್ಗೆ ಇರಲಿ ಗಮನ:
- ಈ ಸಮಯದಲ್ಲಿ ಸಮತೋಲಿತ ಆಹಾರ ಸೇವಿಸುವುದು ತುಂಬಾ ಮುಖ್ಯ.
- ಪ್ರೋಟೀನ್, ವಿಟಮಿನ್ಗಳು ಮತ್ತು ಮಿನರಲ್ಸ್ ಹೊಂದಿರುವ ಆಹಾರವನ್ನು ಸೇವಿಸಬೇಕು.
- ಪರೀಕ್ಷೆಗಳು ಮುಗಿಯುವ ವರೆಗೂ ಮಾಂಸ, ಜಂಕ್ ಫುಡ್ಗಳು, ಮಸಾಲೆಯುಕ್ತ ಮತ್ತು ಹೊರಗಿನ ಆಹಾರವನ್ನು ತ್ಯಜಿಸುವುದು ಉತ್ತಮ.
- ದಿನಕ್ಕೆ ಕನಿಷ್ಠ 6 ರಿಂದ 8 ಗಂಟೆ ನಿದ್ದೆ ಮಾಡಿ.
- ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ಹೊತ್ತು ಧ್ಯಾನ ಮತ್ತು ಪ್ರಾಣಾಯಾಮ ಮಾಡಬೇಕು.
- ಸ್ವಲ್ಪ ಸಮಯ ವ್ಯಾಯಾಮ ಮಾಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ.
- ಓದಿದ್ದನ್ನು ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸಿದರೆ, ನೆನಪಿನಲ್ಲಿ ಉಳಿಯುತ್ತದೆ.