ಬೆಂಗಳೂರು:ಎರಡನೇ ಸುತ್ತಿನ ಸೀಟು ಹಂಚಿಕೆ ಬಳಿಕ ಉಳಿದಿರುವ ಒಟ್ಟು 596 ವೈದ್ಯಕೀಯ (ಇದರಲ್ಲಿ ರದ್ದುಪಡಿಸಿಕೊಂಡ ಸೀಟು ಸೇರಿವೆ) ಸೀಟು ಮಾಪ್-ಅಪ್ ಸುತ್ತಿಗೆ ಲಭ್ಯ ಇದ್ದು, ಅದರ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಮಂಗಳವಾರ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಈ ಸೀಟುಗಳನ್ನು ಪಡೆಯಲು ಆಸಕ್ತಿಯಿದ್ದಲ್ಲಿ ಅರ್ಹ ಅಭ್ಯರ್ಥಿಗಳು ಮುಂಚಿತವಾಗಿಯೇ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ ಪಾವತಿಸಿ, ಯುಜಿನೀಟ್ -2024ರ ಆನ್ಲೈನ್ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಸರ್ಕಾರಿ ಕೋಟಾದ 7, ಖಾಸಗಿಕೋಟಾದ 135, ಮ್ಯಾನೇಜ್ಮೆಂಟ್ ಕೋಟಾದ 453 ಮತ್ತು ಎನ್ಆರ್ಐ ಕೋಟಾದ ಒಂದು ಸೀಟು ಮಾಪ್ ಅಪ್ ಸುತ್ತಿಗೆ ಲಭ್ಯ ಇವೆ ಎಂದು ಹೇಳಿದ್ದಾರೆ.
ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ:ಯುಜಿನೀಟ್ 2024ರ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಮುಂಚಿತವಾಗಿಯೇ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ (ಮೆಡಿಕಲ್ ಕೋರ್ಸ್ ಫೀ ಡೆಪಾಸಿಟ್) ಪಾವತಿಸುವುದು ಕಡ್ಡಾಯ. ಎರಡನೇ ಸುತ್ತಿನಲ್ಲಿ ಕಾಷನ್ ಡೆಪಾಸಿಟ್ ಪಾವತಿಸಿ ಯಾವುದೇ ವೈದ್ಯಕೀಯ ಸೀಟು ಹಂಚಿಕೆಯಾಗದವರು ಪಾವತಿಸಿದ್ದ ಕಾಷನ್ ಡೆಪಾಸಿಟ್ ಕಡಿತ ಮಾಡಿಕೊಂಡು ಉಳಿದ ಮೊತ್ತವನ್ನು ಪಾವತಿಸಬೇಕು. ಆನ್ಲೈನ್/ಚಲನ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ ಪಾವತಿಸಲು ಅ.5ರಿಂದ 8ರವರೆಗೆ ಅವಕಾಶವಿದೆ. ನಂತರ ಅಂತಹವರಿಗೆ ಅ.7ರಿಂದ 14ರವರೆಗೆ ಆಪ್ಷನ್ ದಾಖಲಿಸಲು ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ವರದಿ ಮಾಡಿಕೊಳ್ಳದಿದ್ದರೆ ಶುಲ್ಕ ಮುಟ್ಟುಗೋಲು:ಮಾಪ್ ಅಪ್ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾದಲ್ಲಿ ಅಭ್ಯರ್ಥಿ ಪಾವತಿಸಿದ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿಯನ್ನು ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಮಾಪ್ ಅಪ್ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಅಭ್ಯರ್ಥಿಯು ಕಾಲೇಜಿಗೆ ಪ್ರವೇಶ ಪಡೆಯಲು ವಿಫಲವಾದಲ್ಲಿ ಅಥವಾ ರದ್ದುಗೊಳಿಸಲು ಇಚ್ಚಿಸಿದಲ್ಲಿ ಅಥವಾ ಕಾಲೇಜಿಗೆ ವರದಿ ಮಾಡಿಕೊಳ್ಳದಿದ್ದಲ್ಲಿ ಅಭ್ಯರ್ಥಿಯು ಪಾವತಿಸಿದ್ದ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಇಂತಹ ಅಭ್ಯರ್ಥಿಗಳು ನಿಯಮಾನುಸಾರ ದಂಡವನ್ನೂ ಪಾವತಿಸಬೇಕಾಗುತ್ತದೆ ಹಾಗೂ ಭಾರತ ಕೌನ್ಸೆಲಿಂಗ್ ಸೇರಿದಂತೆ ಮುಂದಿನ ವರ್ಷಗಳ ವೈದ್ಯಕೀಯ ಕೌನ್ಸೆಲಿಂಗ್ನಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಎಚ್ಚರಿಸಿದ್ದಾರೆ.