ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಸಾವಿರ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳ ಭರ್ತಿಗೆ ಕೆಇಎ ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ. ಫೆಬ್ರವರಿಯಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಗೆ ಮಾರ್ಚ್ನಲ್ಲಿ ತಾತ್ಕಾಲಿಕವಾಗಿ ತಡೆ ಹಿಡಿದು, ಅರ್ಜಿ ಸಲ್ಲಿಕೆ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ವಿವರವಾದ ಅಧಿಸೂಚನೆ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಹುದ್ದೆ ವಿವರ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ (ಗ್ರಾಮ ಲೆಕ್ಕಾಧಿಕಾರಿ) ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾವಾರು ಖಾಲಿ ಇರುವ ಹುದ್ದೆಗಳ ಕುರಿತು ಅಧಿಕೃತ ಅಧಿಸೂಚನೆಯಲ್ಲಿ ಅಭ್ಯರ್ಥಿಗಳು ಪರಿಶೀಲನೆ ನಡೆಸಬಹುದಾಗಿದೆ.
ವಿದ್ಯಾರ್ಹತೆ:ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ, ಡಿಪ್ಲೋಮಾ ಅಥವಾ ಎರಡು ವರ್ಷದ ಐಟಿಐ ಅಥವಾ ಎರಡು ವರ್ಷದ ಜೆಒಸಿ, ಜೆಒಡಿಸಿ, ಜೆಎಲ್ಡಿಸಿ ವಿದ್ಯಾಭ್ಯಾಸವನ್ನು ಹೊಂದಿರಬೇಕು.
ವೇತನ: 21,400 - 42,000 ರೂ. ಮಾಸಿಕ
ವಯೋಮಿತಿ:ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 35 ವರ್ಷ ವಯೋಮಿತಿ ಹೊಂದಿರಬೇಕು. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.