ಬೆಂಗಳೂರು:ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪರೀಕ್ಷೆ, ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಕೆಪಿಸಿಎಲ್ ಮರುಪರೀಕ್ಷೆ ಹಾಗೂ ಕೆಎಸ್‌ಎಫ್‌ಸಿ ನೇಮಕಾತಿ ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೇ ಫೆ.17ರಿಂದ 19ರವರೆಗೆ ನಡೆಸಲಿದೆ. ಈ ಪರೀಕ್ಷೆಗಳನ್ನು ಸುಮಾರು 3.5 ಲಕ್ಷ ಅಭ್ಯರ್ಥಿಗಳು ತೆಗೆದುಕೊಳ್ಳುತ್ತಿದ್ದು, ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.
ಫೆ.17ರಂದು ಯಲಹಂಕದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲೆಯಲ್ಲಿ ಕೆಎಸ್‌ಎಫ್‌ಸಿಯಲ್ಲಿನ ಖಾಲಿ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಯುಪಿಎಸ್‌ಸಿ/ಕೆಎಎಸ್/ಗ್ರೂಪ್-ಸಿ/ಎಸ್‌ಎಸ್‌ಸಿ/ಆರ್‌ಆರ್‌ಬಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿದ್ದು, ಅರ್ಹರನ್ನು ಆಯ್ಕೆ ಮಾಡುವ ಸಲುವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೇ 18ರಂದು ಲಿಖಿತ ಪರೀಕ್ಷೆಯನ್ನು ಆಯೋಜಿಸಿದೆ. ಈ ಪರೀಕ್ಷೆಗೆ ಒಟ್ಟು 85 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ರಾಜ್ಯದ 138 ಕೇಂದ್ರಗಳಲ್ಲಿ ಇದೆ.
ವಸತಿ ಶಾಲೆಗಳಲ್ಲಿನ 6ನೇ ತರಗತಿ ಪ್ರವೇಶಕ್ಕಾಗಿ ನಡೆಸುವ ಲಿಖಿತ ಪರೀಕ್ಷೆ ಕೂಡ 18 ರಂದು ನಡೆಯುತ್ತಿದ್ದು, ಇದಕ್ಕೆ ಎರಡು ಲಕ್ಷ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ರಾಜ್ಯದ 563 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.