ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಮತ್ತು ತಮಿಳುನಾಡಿನ ಲಾಭೇತರ ಸಂಸ್ಥೆಯಾಗಿರುವ ಐಸಿಟಿ ಅಕಾಡೆಮಿ ಜೊತೆಗೂಡಿ ತಮಿಳುನಾಡಿನ 48 ಸಾವಿರ ಅಭ್ಯರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿಗೆ ನೆರವಾಗಲು ಮುಂದಾಗಿದೆ. ಈ ಎರಡು ಸಂಸ್ಥೆಗಳು ಜಂಟಿಯಾಗಿ ಮೂರು ವರ್ಷಗಳ ಕಾಲ ವಿದ್ಯಾರ್ಥಿಗಳ ವಿವಿಧ ಕೌಶಲ್ಯ ಅಭಿವೃದ್ಧಿಗೆ ಸಹಾಯ ಮಾಡಲಿದೆ.
ಐಟಿ ತರಬೇತಿ, ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ವಿಮೆ, ಚಿಲ್ಲರೆ, ಇ- ಕಾಮರ್ಸ್, ಲಾಜಿಸ್ಟಿಕ್, ಔಟ್ಪ್ರೊಸೆಸಿಂಗ್ ಪ್ರಕ್ರಿಯೆ ಜ್ಞಾನ ಮತ್ತು ಸಾಫ್ಟ್ ಸ್ಕಿಲ್ಗಳ ಕುರಿತು ತರಬೇತಿ ನೀಡಲಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇನ್ಫೋಸಿಸ್, ಭಾರತದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆಗೆ ಸಂಸ್ಥೆ, ಐಸಿಟಿ ಅಕಾಡೆಮಿ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಯೋಜನೆಗಾಗಿ ಸಂಸ್ಥೆ 33 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಶಿಕ್ಷಣವು ಉದ್ಯೋಗದ ಮಾರ್ಗಗಳನ್ನು ಸೃಷ್ಟಿಸಬೇಕು. ಐಸಿಟಿ ಅಕಾಡೆಮಿಯೊಂದಿಗಿನ ಸಹಯೋಗದ ಮೂಲಕ ಅಗತ್ಯವಾದ ತಾಂತ್ರಿಕ ಮತ್ತು ಸಾಫ್ಟ್ ಸ್ಕಿಲ್ಗಳನ್ನು ಹೊಂದಲು ಪ್ರೆರೇಪಿಸಲಾಗುವುದು. ಈ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿ ಅಭ್ಯಸಿಸುತ್ತಿರುವ ವಿಭಾಗಗಳಲ್ಲಿ ಉತ್ತಮ ಸಾಧನೆಗೈಯಲು ಮತ್ತು ಸುಸ್ಥಿರ ವೃತ್ತಿಜೀವನವನ್ನು ಸೃಷ್ಟಿಸಲು ಪ್ರೋತ್ಸಾಹಿಸುತ್ತದೆ. ಭಾರತದ 2 ಮತ್ತು 3ನೇ ಶ್ರೇಣಿಯಲ್ಲಿ ಇಂಜಿನಿಯರಿಂಗ್, ಕಲೆ ಮತ್ತು ವಿಜ್ಞಾನ ಪದವಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಉದ್ಯೋಗ ಪಡೆಯಲು ನೆರವಾಗುವಂತಹ ಅಗತ್ಯ, ಪ್ರಸ್ತುತ ಕೌಶಲ್ಯವನ್ನು ಈ ಯೋಜನೆ ಮೂಲಕ ಕಲಿಸಲಾಗುವುದು.