ಹೈದರಾಬಾದ್:ಯಾವುದೇ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಅಗತ್ಯವಾಗಿರುವುದು ನಿರ್ವಹಣಾ ಕೌಶ್ಯಲ್ಯವಾಗಿದ್ದು, ಇದು ಯಶಸ್ಸಿನ ಸೂತ್ರ ಕೂಡ ಹೌದು. ಜೊತೆಗೆ ಸಮಯ ಮತ್ತು ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿದಾಗ ಈ ಯಶಸ್ಸಿನ ಅವಕಾಶ ಹೆಚ್ಚು. ಇವು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಸ್ಪಷ್ಟ ಗುರಿ ಮತ್ತು ನಿಖರವಾದ ಯೋಜನೆಗಳಿಲ್ಲದೇ ಅಂದುಕೊಂಡ ಕ್ಷೇತ್ರದಲ್ಲಿ ಎತ್ತರದ ಬೆಳವಣಿಗೆ ಅಸಾಧ್ಯ. ಅಂತಹ ಗುರಿ ಸಾಧನೆಗೆ ಗೆಲುವಿನ ಹಾದಿಗೆ ಅಳವಡಿಸಿಕೊಳ್ಳಬೇಕಿರುವ ಅಗತ್ಯವಿರುವ ಕೆಲವು ಕೌಶಲ್ಯಗಳು ಇಲ್ಲಿವೆ.
ಗುರಿ ರೂಪಿಸಿ: ನಾವು ಆಯ್ಕೆ ಮಾಡಿಕೊಳ್ಳುವ ಗುರಿಗಳು ಪ್ರಾಯೋಗಿಕವಾಗಿರಬೇಕು. ಸಾಧಿಸಲಾಗದ ಗುರಿಗಳು ಹಾಕಿಕೊಳ್ಳುವ ಮೂಲಕ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುತ್ತೇವೆ ಎಂಬುದನ್ನು ಮರೆಯಬಾರದು. ನಿರ್ದಿಷ್ಟ ಗಡುವು ಹಾಕಿಕೊಂಡು ಉತ್ತಮ ಮತ್ತು ಯೋಜಿತ ಗುರಿ ರೂಪಿಸಿದಾಗ ಗೆಲುವು ಸಾಧ್ಯವಾಗುತ್ತದೆ. ಆಯ್ಕೆ ಮಾಡಿಕೊಂಡ ಗುರಿಯನ್ನು ಹಂತ ಹಂತವಾಗಿ ಸಾಧಿಸಲು ಸಮಯದ ಮಿತಿ ರೂಪಿಸುವುದರಿಂದ ಯೋಜಿತ ಕೆಲಸವನ್ನು ಸಾಧಿಸುವ ಜೊತೆಗೆ ದಕ್ಷತೆ ಕೂಡ ಹೆಚ್ಚುತ್ತದೆ.
ಅಗತ್ಯ ಏನೆಂಬುದನ್ನು ಅರಿಯಿರಿ: ಅಗತ್ಯವಾದ ಅಂಶಗಳ ಕಡೆಗೆ ಕೆಲಸ ಮಾಡಿ. ವಾರದಲ್ಲಿ ನಿಮಗೆ ನಾಲ್ಕರಿಂದ ಐದು ಗುರಿ ಇತ್ತು ಎಂದರೆ, ಅದರಲ್ಲಿ ಯಾವುದು ಮುಖ್ಯವಾಗಿದೆ. ಯಾವುದನ್ನು ಮೊದಲು ಮಾಡಬೇಕು ಎಂಬುದನ್ನು ಯೋಜಿಸಿ, ಅಗತ್ಯತೆ ಅನುಸಾರವಾಗಿ ಕಾರ್ಯ ನಿರ್ವಹಿಸಿ. ಕಡಿಮೆ ಅವಧಿಯಲ್ಲಿ ಸಣ್ಣ ಗುರಿ ಸಾಧಿಸುವ ಮೂಲಕ ಸಾಮರ್ಥ್ಯವನ್ನು ತೋರಿಸಿ.