ಕರ್ನಾಟಕ

karnataka

ETV Bharat / education-and-career

ಅರ್ಧದಷ್ಟು ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್​ ಬರಲ್ಲ: ASER ವರದಿ

ವಾರ್ಷಿಕ ಶಿಕ್ಷಣ ಸ್ಥಿತಿಗತಿ ವರದಿಯ ಅಂಕಿಅಂಶಗಳ ಬಗ್ಗೆ ಇಲ್ಲಿದೆ ಮಾಹಿತಿ.

Etv Bharat
Etv Bharat

By ETV Bharat Karnataka Team

Published : Jan 19, 2024, 11:51 PM IST

ನವದೆಹಲಿ:ಗ್ರಾಮೀಣ ಭಾರತದ 14ರಿಂದ 18 ವರ್ಷದೊಳಗಿನ ಶೇ.42ರಷ್ಟು ಮಕ್ಕಳು ಸುಲಭವಾದ ಇಂಗ್ಲಿಷ್​ ವಾಕ್ಯ ಓದಲು ಅಸಮರ್ಥರಾಗಿದ್ದಾರೆ ಎಂದು ಬುಧವಾರ ಬಿಡುಗಡೆಯಾದ ವಾರ್ಷಿಕ ಶಿಕ್ಷಣ ಸ್ಥಿತಿಗತಿ ವರದಿ (ಎಎಸ್ಇಆರ್) 2023 ತಿಳಿಸಿದೆ. ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಕಳಿಗೆ ಸರಳ ಗಣಿತ ಭಾಗಾಕಾರ ಲೆಕ್ಕ ಬಿಡಿಸಲೂ ಬರುವುದಿಲ್ಲ ಎಂದು ವರದಿ ಹೇಳಿದೆ.

ಎಎಸ್ಇಆರ್ 2023ರ 'ಬಿಯಾಂಡ್ ಬೇಸಿಕ್ಸ್' ಸಮೀಕ್ಷೆಯನ್ನು 26 ರಾಜ್ಯಗಳ 28 ಜಿಲ್ಲೆಗಳಲ್ಲಿ ನಡೆಸಲಾಗಿದ್ದು, 14 ರಿಂದ 18 ವರ್ಷ ವಯಸ್ಸಿನ ಒಟ್ಟು 34,745 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶವನ್ನು ಹೊರತುಪಡಿಸಿ, ಪ್ರತಿ ಪ್ರಮುಖ ರಾಜ್ಯದಲ್ಲಿ ಒಂದು ಗ್ರಾಮೀಣ ಜಿಲ್ಲೆಯಲ್ಲಿ ಸಮೀಕ್ಷೆ ಮಾಡಲಾಗಿದೆ. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಎರಡು ಗ್ರಾಮೀಣ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಯಿತು.

ಪ್ರಥಮ್ ಫೌಂಡೇಶನ್ ಪ್ರಕಟಿಸಿದ ವಾರ್ಷಿಕ ವರದಿಯು 14ರಿಂದ 18 ವಯೋಮಾನದ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗಾಕಾರ ಗಣಿತ ಲೆಕ್ಕ ಬಿಡಿಸಲು ಅಸಮರ್ಥರಾಗಿದ್ದಾರೆ ಎಂದು ಕಂಡುಹಿಡಿದಿದೆ. "ಈ ವಯಸ್ಸಿನವರಲ್ಲಿ ಸುಮಾರು 25 ಪ್ರತಿಶತದಷ್ಟು ಜನರು ಇನ್ನೂ ತಮ್ಮ ಪ್ರಾದೇಶಿಕ ಭಾಷೆಯಲ್ಲಿ 2 ನೇ ತರಗತಿ ಮಟ್ಟದ ಪಠ್ಯವನ್ನು ನಿರರ್ಗಳವಾಗಿ ಓದಲು ಸಾಧ್ಯವಿಲ್ಲ. ಅರ್ಧಕ್ಕಿಂತ ಹೆಚ್ಚು ಮಕ್ಕಳು ಭಾಗಾಕಾರ (3-ಅಂಕಿಯಿಂದ 1-ಅಂಕಿಯ) ಗಣಿತ ಬಿಡಿಸಲು ಕಷ್ಟಪಡುತ್ತಾರೆ. 14 ರಿಂದ 18 ವರ್ಷ ವಯಸ್ಸಿನವರಲ್ಲಿ ಕೇವಲ 43.3 ಪ್ರತಿಶತದಷ್ಟು ಮಕ್ಕಳು ಮಾತ್ರ ಇಂಥ ಲೆಕ್ಕಗಳನ್ನು ಸರಿಯಾಗಿ ಮಾಡಬಲ್ಲವರಾಗಿದ್ದಾರೆ. ಸಾಮಾನ್ಯವಾಗಿ ಈ ಕೌಶಲ್ಯವು 3 ಮತ್ತು 4ನೇ ತರಗತಿಯ ಮಕ್ಕಳಲ್ಲಿ ನಿರೀಕ್ಷಿಸಲಾಗುತ್ತದೆ." ಎಂದು ವರದಿ ತಿಳಿಸಿದೆ.

"ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಮಕ್ಕಳು ಇಂಗ್ಲಿಷ್​ನಲ್ಲಿನ ವಾಕ್ಯಗಳನ್ನು ಓದಬಲ್ಲರು (57.3). ಇಂಗ್ಲಿಷ್​ ವಾಕ್ಯಗಳನ್ನು ಓದಬಲ್ಲವರ ಪೈಕಿ ಸುಮಾರು ಮುಕ್ಕಾಲು ಭಾಗ ಮಕ್ಕಳು ಮಾತ್ರ ಅವುಗಳ ಅರ್ಥಗಳನ್ನು (73.5 ಪ್ರತಿಶತ) ಹೇಳಬಲ್ಲರು" ಎಂದು ವರದಿ ಹೇಳಿದೆ. ಎಲ್ಲಾ ವಿಭಾಗಗಳನ್ನು ನೋಡುವುದಾದರೆ ಬಾಲಕಿಯರು (76 ಪ್ರತಿಶತ) ತಮ್ಮ ಪ್ರಾದೇಶಿಕ ಭಾಷೆಯಲ್ಲಿ 2 ನೇ ತರಗತಿ ಮಟ್ಟದ ಪಠ್ಯವನ್ನು ಓದುವಲ್ಲಿ ಬಾಲಕರಿಗಿಂತ (70.9 ಪ್ರತಿಶತ) ಉತ್ತಮವಾಗಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಅಂಕಗಣಿತ ಮತ್ತು ಇಂಗ್ಲಿಷ್ ಅಭ್ಯಾಸದಲ್ಲಿ ಬಾಲಕರು ಬಾಲಕಿಯರಿಗಿಂತ ಉತ್ತಮ ಸಾಧನೆ ತೋರಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದ ಸುಮಾರು 45 ಪ್ರತಿಶತದಷ್ಟು ವಿದ್ಯಾರ್ಥಿಗಳು ತಾವು ರಾತ್ರಿ ಮಲಗುವ ಮತ್ತು ಬೆಳಿಗ್ಗೆ ಎಚ್ಚರಗೊಳ್ಳುವ ಸಮಯದ ಆಧಾರದ ಮೇಲೆ ಎಷ್ಟು ಗಂಟೆಗಳ ಕಾಲ ಮಲಗಿದ್ದೆ ಎಂಬುದನ್ನು ಲೆಕ್ಕಹಾಕಲು ಸಮರ್ಥರಾಗಿದ್ದಾರೆ ಎಂದು ವರದಿ ಹೇಳಿದೆ.

ಎಎಸ್ಇಆರ್ ಇದು ರಾಷ್ಟ್ರವ್ಯಾಪಿ ನಾಗರಿಕ ನೇತೃತ್ವದ ಕುಟುಂಬ ಸಮೀಕ್ಷೆಯಾಗಿದ್ದು, ಗ್ರಾಮೀಣ ಭಾರತದಲ್ಲಿ ಮಕ್ಕಳ ಶಾಲಾ ಶಿಕ್ಷಣ ಮತ್ತು ಕಲಿಕೆಯ ಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತದೆ. 2005 ರಲ್ಲಿ ಮೊದಲ ಬಾರಿಗೆ ಜಾರಿಗೆ ಬಂದ 'ಮೂಲ' ಎಎಸ್ಇಆರ್ ಸಮೀಕ್ಷೆಯನ್ನು 2014 ರವರೆಗೆ ವಾರ್ಷಿಕವಾಗಿ ನಡೆಸಲಾಯಿತು ಮತ್ತು 2016 ರಲ್ಲಿ ಪರ್ಯಾಯ ವರ್ಷದ ಚಕ್ರಕ್ಕೆ ಬದಲಾಯಿಸಲಾಯಿತು.

'ಬೇಸಿಕ್' ಎಎಸ್ಇಆರ್ 3 ರಿಂದ 16 ವರ್ಷ ವಯಸ್ಸಿನ ಮಕ್ಕಳಿಗೆ ಪ್ರಿಸ್ಕೂಲ್ ಮತ್ತು ಶಾಲೆಯಲ್ಲಿ ದಾಖಲಾತಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು 5 ರಿಂದ 16 ವರ್ಷದೊಳಗಿನ ಮಕ್ಕಳನ್ನು ಅವರ ಅಡಿಪಾಯ ಓದುವಿಕೆ ಮತ್ತು ಅಂಕಗಣಿತ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳಲು ಒಬ್ಬೊಬ್ಬರನ್ನಾಗಿ ಮೌಲ್ಯಮಾಪನ ಮಾಡುತ್ತದೆ. ತನ್ನ ನೀತಿಗಳನ್ನು ರೂಪಿಸುವಾಗ ಎಎಸ್ಇಆರ್ ವರದಿಗಳನ್ನು ಸರ್ಕಾರ ಬಳಸುತ್ತದೆ.

ABOUT THE AUTHOR

...view details