ನವದೆಹಲಿ: ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾದ ಆಹಾರ ವಸ್ತುಗಳ ಚಿತ್ರಗಳನ್ನು ತನ್ನ ಪ್ಲಾಟ್ಫಾರ್ಮ್ನಿಂದ ತೆಗೆಯುವುದಾಗಿ ಜೊಮ್ಯಾಟೊ ಹೇಳಿದೆ. ಜೊಮ್ಯಾಟೊದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಸೃಷ್ಟಿಸಲಾದ ಆಹಾರ ಮತ್ತು ಖಾದ್ಯ ಚಿತ್ರಗಳನ್ನು ಹಾಕಿರುವುದಕ್ಕೆ ಹಲವಾರು ಗ್ರಾಹಕರು ಆಕ್ಷೇಪ ವ್ಯಕ್ತಪಡಿಸಿದ ನಂತರ, ಇಂಥ ಚಿತ್ರಗಳನ್ನು ತೆಗೆದುಹಾಕುವುದಾಗಿ ಸಿಇಒ ದೀಪಿಂದರ್ ಗೋಯಲ್ ಭಾನುವಾರ ಪ್ರಕಟಿಸಿದ್ದಾರೆ.
ಆಹಾರದ ಚಿತ್ರಗಳನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಲು ಕಂಪನಿಯು ಎಐ ತಂತ್ರಜ್ಞಾನದಿಂದ ಸೃಷ್ಟಿಸಲಾದ ಚಿತ್ರಗಳನ್ನು ಹಾಕಿತ್ತು.
ಸದ್ಯ ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಇಒ ಗೋಯಲ್, "ದಾರಿ ತಪ್ಪಿಸುವ ಚಿತ್ರಗಳ ಬಗ್ಗೆ ಹಲವಾರು ದೂರುಗಳು ಬಂದಿವೆ" ಎಂದು ಬರೆದಿದ್ದಾರೆ.
"ಇಂಥ ಚಿತ್ರಗಳನ್ನು ಹಾಕುವುದರಿಂದ ಗ್ರಾಹಕರು ಮತ್ತು ಹೋಟೆಲ್ಗಳ ಮಧ್ಯದ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ ಹಾಗೂ ಇದರಿಂದ ರೀಫಂಡ್ ಕೇಳುವವರ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಗ್ರಾಹಕರಿಂದ ರೇಟಿಂಗ್ ಕಡಿಮೆಯಾಗುತ್ತದೆ" ಎಂದು ಅವರು ಹೇಳಿದ್ದಾರೆ.
"ಜೊಮಾಟೊದಲ್ಲಿ ನಮ್ಮ ಕೆಲಸವನ್ನು ಪರಿಣಾಮಕಾರಿಯಾಗಿಸಲು ನಾವು ವಿವಿಧ ರೀತಿಯಲ್ಲಿ ಎಐ ಅನ್ನು ಬಳಸುತ್ತೇವೆ. ಆದರೆ ರೆಸ್ಟೋರೆಂಟ್ ಮೆನುಗಳಲ್ಲಿನ ಆಹಾರ ಪದಾರ್ಥಗಳ ವಿಷಯದಲ್ಲಿ ಎಐ ಚಿತ್ರಗಳನ್ನು ಹಾಕುವುದನ್ನು ನಾವು ಒಪ್ಪುವುದಿಲ್ಲ. ಇಂದಿನಿಂದ ರೆಸ್ಟೋರೆಂಟ್ ಮೆನುಗಳಲ್ಲಿ ಎಐ ರಚಿತವಾದ ಆಹಾರದ ಚಿತ್ರಗಳನ್ನು ಬಳಸದಂತೆ ನಾವು ನಮ್ಮ ರೆಸ್ಟೋರೆಂಟ್ ಪಾರ್ಟ್ನರ್ಗಳಿಗೆ ಸೂಚಿಸುತ್ತಿದ್ದೇವೆ. ಈ ತಿಂಗಳ ಅಂತ್ಯದ ವೇಳೆಗೆ ಮೆನುಗಳಲ್ಲಿ ಉಳಿದ ಅಂತಹ ಚಿತ್ರಗಳನ್ನು ನಾವಾಗಿಯೇ ತೆಗೆದುಹಾಕಲು ಪ್ರಾರಂಭಿಸುತ್ತೇವೆ" ಎಂದು ಹೇಳಿದರು.
ಜೊಮ್ಯಾಟೊದ ಉಚಿತ ಫೋಟೊಗ್ರಫಿ ಸೌಲಭ್ಯವನ್ನು ಬಳಸಿಕೊಂಡು ಆಹಾರದ ನೈಜ ಚಿತ್ರಗಳನ್ನು ಹಾಕುವಂತೆ ರೆಸ್ಟೋರೆಂಟ್ಗಳಿಗೆ ಗೋಯಲ್ ಕರೆ ನೀಡಿದ್ದಾರೆ.
ಕಳೆದ ವರ್ಷ, ಜೊಮಾಟೊ ಪಿಕ್ನಿಕ್ ಎಐ (ಪಿಕ್ಚರ್ ನೈಸ್ಲಿ ಎಐ) ಎಂಬ ಸಾಧನವನ್ನು ಪರಿಚಯಿಸಿದೆ. ಇದು ಆಹಾರದ ಚಿತ್ರಗಳನ್ನು ಮತ್ತಷ್ಟು ಉತ್ತಮವಾಗಿ ಪ್ರಸ್ತುತಪಡಿಸುವ ಸಾಧನವಾಗಿದೆ. ರೆಸ್ಟೋರೆಂಟ್ಗಳು ಇದನ್ನು ಬಳಸಿ ತಮ್ಮ ಆಹಾರದ ಚಿತ್ರಗಳನ್ನು ಮತ್ತಷ್ಟು ಆಕರ್ಷಕವಾಗಿಸಬಹುದಾಗಿದೆ. ಕೃತಕ ಬುದ್ಧಿಮತ್ತೆ (ಎಐ) ಬಳಸಿ ರಚಿಸಲಾದ ಚಿತ್ರಗಳು ಅನನ್ಯ ಮತ್ತು ವಾಸ್ತವಿಕವಾಗಿ ಕಾಣುವುದರಿಂದ ಹೆಚ್ಚು ಜನಪ್ರಿಯವಾಗುತ್ತಿವೆ.
2025ರ ಮೊದಲ ತ್ರೈಮಾಸಿಕದಲ್ಲಿ ಜೊಮ್ಯಾಟೊದ ಆದಾಯ ಶೇಕಡಾ 74ರಷ್ಟು ಬೆಳವಣಿಗೆಯಾಗಿ (ವರ್ಷದಿಂದ ವರ್ಷಕ್ಕೆ) 4,206 ಕೋಟಿ ರೂ.ಗೆ ತಲುಪಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ ಶೇಕಡಾ 126ರಷ್ಟು ಏರಿಕೆಯಾಗಿ 253 ಕೋಟಿ ರೂ.ಗೆ ತಲುಪಿದೆ.
ಇದನ್ನೂ ಓದಿ: 'ಯುಎಇಯಲ್ಲಿ ಶಾಪಿಂಗ್ ಮಾಡಿ, ರೂಪಾಯಿಯಲ್ಲೇ ಪಾವತಿಸಿ': ಭಾರತದ UPI ಕಮಾಲ್! - UPI in UAE