ನವದೆಹಲಿ: ಒಟ್ಟಾರೆ ಜನಸಂಖ್ಯೆಯ ಉದ್ಯೋಗ ಪ್ರಮಾಣವನ್ನು ಸೂಚಿಸುವ ಅಂದಾಜು ಕಾರ್ಮಿಕರ ಜನಸಂಖ್ಯಾ ಅನುಪಾತ (ಡಬ್ಲ್ಯುಪಿಆರ್) ಕಳೆದ 7 ವರ್ಷಗಳಲ್ಲಿ, 2017-18ರಲ್ಲಿ ಇದ್ದ ಶೇ 46.8ರಿಂದ 2023-24ರಲ್ಲಿ ಶೇ 58.2ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಗುರುವಾರ ರಾಜ್ಯಸಭೆಗೆ ತಿಳಿಸಿದರು. ಇದೇ ಅವಧಿಯಲ್ಲಿ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ನಿರುದ್ಯೋಗ ದರ (ಯುಆರ್) ಶೇಕಡಾ 6 ರಿಂದ 3.2 ಕ್ಕೆ ಇಳಿದಿದೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
2017-18ರಿಂದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ನಡೆಸುತ್ತಿರುವ ವಾರ್ಷಿಕ ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ (ಪಿಎಲ್ಎಫ್ಎಸ್) ಮೂಲಕ ಉದ್ಯೋಗ ಮತ್ತು ನಿರುದ್ಯೋಗದ ಡೇಟಾವನ್ನು ಸಂಗ್ರಹಿಸಲಾಗುತ್ತದೆ ಎಂದು ಸಚಿವರು ಹೇಳಿದರು. ಸಮೀಕ್ಷೆಯ ಅವಧಿಯು ಪ್ರತೀ ವರ್ಷ ಜುಲೈನಿಂದ ಜೂನ್ ವರೆಗೆ ಇರುತ್ತದೆ ಹಾಗೂ ರಾಜ್ಯವಾರು ಡಬ್ಲ್ಯುಪಿಆರ್ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ವೆಬ್ಸೈಟ್ನಲ್ಲಿಯೂ ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು.
ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ (ಎಎಸ್ಯುಎಸ್ಇ) ವರದಿಗಳು ಲಭ್ಯವಿರುವ ಎಎಸ್ಯುಎಸ್ಇ ವರದಿಗಳ ಪ್ರಕಾರ, ಕಾರ್ಮಿಕರ ಅಂದಾಜು ಸಂಖ್ಯೆ 2021-22ರಲ್ಲಿ 9.79 ಕೋಟಿಯಿಂದ 2022-23ರಲ್ಲಿ 10.96 ಕೋಟಿಗೆ ಏರಿದೆ ಎಂದು ಹೇಳಿದರು.
ಉತ್ಪಾದನೆ, ವ್ಯಾಪಾರ ಮತ್ತು ಇತರ ಸೇವಾ ವಲಯದಲ್ಲಿ ಅಸಂಘಟಿತ ಕೃಷಿಯೇತರ ಸಂಸ್ಥೆಗಳ ವಿವಿಧ ಆರ್ಥಿಕ ಮತ್ತು ಕಾರ್ಯಾಚರಣೆಯ ಗುಣಲಕ್ಷಣಗಳನ್ನು ಎಎಸ್ಯುಎಸ್ಇ ಪ್ರತ್ಯೇಕವಾಗಿ ಅಳೆಯುತ್ತದೆ.