ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಮಾಸ್ಕೋಗೆ ಭೇಟಿ ನೀಡಲಿದ್ದಾರೆ. 22ನೇ ಭಾರತ-ರಷ್ಯಾ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಈ ಶೃಂಗಸಭೆಯಲ್ಲಿ ಚರ್ಚೆಗೆ ಬರಲಿರುವ ವಿಷಯಗಳ ಪೈಕಿ ದ್ವಿಪಕ್ಷೀಯ ವ್ಯಾಪಾರವೇ ಮುಖ್ಯವಾಗಿದೆ.
ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ವ್ಯಾಪಾರವು ವರ್ಷಗಳಿಂದ ಹೆಚ್ಚಾಗುತ್ತಿದೆ. ಆದರೆ, ಇದು ಹೆಚ್ಚಿನ ಅಸಮತೋಲನವನ್ನು ಹೊಂದಿದೆ. ರಷ್ಯಾದ ಪರವಾಗಿವೇ ಅಧಿಕ ಒಲವು ಹೊಂದಿದೆ. ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ, ''ಭಾರತ-ರಷ್ಯಾ ದ್ವಿಪಕ್ಷೀಯ ವ್ಯಾಪಾರವು 2023-24ರಲ್ಲಿ ತೀವ್ರ ಏರಿಕೆ ಕಂಡಿದೆ. ಎರಡು ದೇಶಗಳ ನಡುವಿನ ಬಲವಾದ ಇಂಧನ ಸಹಕಾರದಿಂದಾಗಿ 65 ಶತಕೋಟಿ ಡಾಲರ್ ಸಮೀಪಕ್ಕೆ ತಲುಪಿದೆ'' ಎಂದು ಹೇಳಿದರು.
''ನಾವು 4 ಬಿಲಿಯನ್ ಡಾಲರ್ನಷ್ಟು ಭಾರತೀಯ ರಫ್ತುಗಳನ್ನು ಹೊಂದಿದ್ದರೆ, 60 ಬಿಲಿಯನ್ ಡಾಲರ್ನಷ್ಟು ಆಮದುಗಳನ್ನು ಹೊಂದಿದ್ದೇವೆ. ಈ ವ್ಯಾಪಾರವು ಅಸಮತೋಲನದಿಂದ ಕೂಡಿದ್ದು, ಇದೇ ನಮ್ಮ ಚರ್ಚೆಗಳಲ್ಲಿ ಆದ್ಯತೆಯ ವಿಷಯ. ಇಂಧನ, ಬ್ಯಾಂಕಿಂಗ್, ರೈಲ್ವೆ ಮತ್ತು ಉಕ್ಕು ಕ್ಷೇತ್ರಗಳನ್ನು ಒಳಗೊಂಡಂತೆ ಉಭಯ ದೇಶಗಳ ನಡುವೆ ಹೂಡಿಕೆ ಸಂಬಂಧಗಳ ಬೆಳೆಯುತ್ತಿವೆ. ಇವು ನಮ್ಮ ಹೂಡಿಕೆ ಪಾಲುದಾರಿಕೆಯ ಬೆಳವಣಿಗೆಯ ಕ್ಷೇತ್ರಗಳಾಗಿವೆ'' ಎಂದು ತಿಳಿಸಿದರು.
ರಫ್ತು 4.26 ಬಿಲಿಯನ್ ಡಾಲರ್, ಆಮದು 61.44 ಬಿಲಿಯನ್ ಡಾಲರ್: ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಪ್ರಕಾರ, ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಹೆಚ್ಚಿಸುವುದನ್ನು ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಬ್ಬರೂ ಆದ್ಯತೆಯ ಕ್ಷೇತ್ರವೆಂದು ಗುರುತಿಸಿದ್ದಾರೆ. 2025ರ ವೇಳೆಗೆ ದ್ವಿಪಕ್ಷೀಯ ಹೂಡಿಕೆಯನ್ನು 50 ಬಿಲಿಯನ್ ಡಾಲರ್‌ಗೆ ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು 30 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಉಭಯ ನಾಯಕರು ಈ ಹಿಂದೆ ವ್ಯಕ್ತಪಡಿಸಿದ್ದರು.
ವಾಣಿಜ್ಯ ಇಲಾಖೆಯ ಅಂಕಿ - ಅಂಶಗಳ ಪ್ರಕಾರ, 2023-24ರ ಆರ್ಥಿಕ ಸಾಲಿನಲ್ಲೇ ದ್ವಿಪಕ್ಷೀಯ ವ್ಯಾಪಾರವು ಸಾರ್ವಕಾಲಿಕ ಗರಿಷ್ಠ 65.70 ಬಿಲಿಯನ್ ಡಾಲರ್‌ಗೆ ತಲುಪಿದೆ. ಈ ಒಟ್ಟು ದ್ವಿಪಕ್ಷೀಯ ಸರಕುಗಳ ವ್ಯಾಪಾರದಲ್ಲಿ ಭಾರತದ ರಫ್ತುಗಳು 4.26 ಬಿಲಿಯನ್ ಡಾಲರ್ನಷ್ಟಾಗಿದ್ದರೆ, ಭಾರತದ ಆಮದುಗಳು 61.44 ಬಿಲಿಯನ್ ಡಾಲರ್ಗಳಿಷ್ಟಿದೆ ಎಂದು ರಾಯಭಾರ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತದಿಂದ ರಫ್ತು ಮಾಡುವ ಪ್ರಮುಖ ವಸ್ತುಗಳೆಂದರೆ ಔಷಧಗಳು, ಸಾವಯವ ರಾಸಾಯನಿಕಗಳು, ವಿದ್ಯುತ್ ಯಂತ್ರಗಳು ಮತ್ತು ಯಾಂತ್ರಿಕ ಉಪಕರಣಗಳು, ಕಬ್ಬಿಣ ಮತ್ತು ಉಕ್ಕು. ಮತ್ತೊಂದೆಡೆ, ರಷ್ಯಾದಿಂದ ಆಮದು ಮಾಡಿಕೊಳ್ಳುವ ಪ್ರಮುಖ ವಸ್ತುಗಳೆಂದರೆ, ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರಗಳು, ಖನಿಜ ಸಂಪನ್ಮೂಲಗಳು, ಅಮೂಲ್ಯ ಕಲ್ಲುಗಳು ಮತ್ತು ಲೋಹಗಳು, ಸಸ್ಯಜನ್ಯ ಎಣ್ಣೆ ಇತ್ಯಾದಿ.
ಈ ವ್ಯಾಪಾರ ಅಸಮತೋಲನಕ್ಕೆ ಕಾರಣಗಳೇನು?:ಭಾರತ ಮತ್ತು ರಷ್ಯಾ ನಡುವಿನ ವ್ಯಾಪಾರ ಅಸಮತೋಲನವು ಆರ್ಥಿಕ, ಭೌಗೋಳಿಕ ರಾಜಕೀಯ, ರಚನಾತ್ಮಕ ಮತ್ತು ಮಾರುಕಟ್ಟೆಯ ನಿರ್ದಿಷ್ಟ ಅಂಶಗಳನ್ನು ಒಳಗೊಂಡಿರುವ ವಿವಿಧ ಅಂಶಗಳಿಗೆ ಕಾರಣವಾಗಿದೆ. ಭಾರತವು ಗಣನೀಯ ಪ್ರಮಾಣದ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಕಲ್ಲಿದ್ದಲನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತದೆ.
ಇಂಧನ ಆಮದುಗಳು ರಷ್ಯಾದಿಂದ ಭಾರತದ ಒಟ್ಟಾರೆ ಆಮದುಗಳ ಗಣನೀಯ ಭಾಗವನ್ನು ತೆಗೆದುಕೊಂಡಿವೆ. ಭಾರತದ ಇಂಧನ ಅಗತ್ಯತೆಗಳು ಮತ್ತು ಪ್ರಮುಖ ಇಂಧನ ಪೂರೈಕೆದಾರರಾಗಿ ರಷ್ಯಾದ ಪಾತ್ರವನ್ನು ಗಮನಿಸಿದರೆ, ಈ ಅಂಶವು ವ್ಯಾಪಾರದ ಅಸಮತೋಲನದ ನಿರ್ಣಾಯಕ ಅಂಶವಾಗಿದೆ.
ರಷ್ಯಾದಿಂದ ಮುಖ್ಯವಾಗಿ ತೈಲ ಮತ್ತು ರಸಗೊಬ್ಬರಗಳು ಆಮದು ಮಾಡಿಕೊಳ್ಳುವಲ್ಲಿ ಹಠಾತ್ ಜಿಗಿತ ಕಂಡು ಬಂದಿದೆ. ಇದು 2022ರ ಆರಂಭದಲ್ಲಿ ಏರಿಕೆಯಾಗುತ್ತಲೇ ಇದೆ. ಇದು ದ್ವಿಪಕ್ಷೀಯ ವ್ಯಾಪಾರದಲ್ಲಿನ ಈ ಹೆಚ್ಚಳದ ಹಿಂದಿನ ಪ್ರಮುಖ ಕಾರಣವಾಗಿದೆ. ಪೆಟ್ರೋಲಿಯಂ ತೈಲ ಮತ್ತು ಇತರ ಇಂಧನ ವಸ್ತುಗಳು ರಷ್ಯಾದಿಂದ ಭಾರತದ ಒಟ್ಟು ಆಮದುಗಳಲ್ಲಿ ಶೇ.84ರಷ್ಟು ಪಾಲು ಹೊಂದಿದ್ದು, ರಸಗೊಬ್ಬರಗಳು ಎರಡನೇ ಸ್ಥಾನದಲ್ಲಿವೆ.
ರಷ್ಯಾಕ್ಕೆ ಭಾರತೀಯ ರಫ್ತುಗಳು ತುಲನಾತ್ಮಕವಾಗಿ ವೈವಿಧ್ಯಮಯವಾಗಿವೆ. ಇವು ಔಷಧಗಳು, ಕೃಷಿ ಉತ್ಪನ್ನಗಳು, ಯಂತ್ರೋಪಕರಣಗಳು ಮತ್ತು ಜವಳಿಗಳನ್ನು ಒಳಗೊಂಡಿವೆ. ಆದಾಗ್ಯೂ, ಈ ರಫ್ತುಗಳ ಪ್ರಮಾಣ ಮತ್ತು ಮೌಲ್ಯವು ರಷ್ಯಾದಿಂದ ಇಂಧನ ಉತ್ಪನ್ನಗಳ ಗಣನೀಯ ಆಮದುಗಳನ್ನು ಸರಿದೂಗಿಸಲು ಸಾಕಾಗುತ್ತಿಲ್ಲ.
ರಷ್ಯಾದ ಮೇಲಿನ ಪಾಶ್ಚಿಮಾತ್ಯ ನಿರ್ಬಂಧಗಳು ವ್ಯಾಪಾರದ ಮಾದರಿಗಳನ್ನು ಬದಲಾಯಿಸಿವೆ. ಭಾರತವನ್ನು ಒಳಗೊಂಡಂತೆ ಅದರ ರಫ್ತುಗಳಿಗೆ ಪರ್ಯಾಯ ಮಾರುಕಟ್ಟೆಗಳನ್ನು ಹುಡುಕಲು ರಷ್ಯಾದತ್ತ ತಳ್ಳುತ್ತವೆ. ಈ ನಿರ್ಬಂಧಗಳು ಕೆಲವು ಹೆಚ್ಚಿನ - ಮೌಲ್ಯದ ಸರಕುಗಳನ್ನು ರಫ್ತು ಮಾಡುವ ರಷ್ಯಾದ ಸಾಮರ್ಥ್ಯವನ್ನು ಸೀಮಿತಗೊಳಿಸಿದೆ. ಇದರಿಂದಾಗಿ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ.
ಭಾರತ ಮತ್ತು ರಷ್ಯಾ ವಿಶೇಷ ಮತ್ತು ಸವಲತ್ತು ಕಾರ್ಯತಂತ್ರದ ಪಾಲುದಾರಿಕೆ ಹಂಚಿಕೊಳ್ಳುತ್ತವೆ. ಇದರ ಅಡಿ ರಕ್ಷಣಾ ಸಂಬಂಧಿತ ವ್ಯಾಪಾರವು ಬರುತ್ತದೆ. ಆದಾಗ್ಯೂ, ರಕ್ಷಣಾ ಸಂಬಂಧಿತ ವ್ಯಾಪಾರವು ಸಾಮಾನ್ಯವಾಗಿ ಸಾಮಾನ್ಯ ವ್ಯಾಪಾರ ಅಂಕಿ - ಅಂಶಗಳಲ್ಲಿ ಪ್ರತಿಫಲಿಸುವುದಿಲ್ಲ. ಏಕೆಂದರೆ, ಇದು ಸರ್ಕಾರದಿಂದ ಸರ್ಕಾರದ ಒಪ್ಪಂದಗಳು ಮತ್ತು ಹಣಕಾಸು ವ್ಯವಸ್ಥೆಗಳ ಅಡಿ ಒಳಗೊಂಡಿದೆ.
ಲಾಜಿಸ್ಟಿಕಲ್ ಸವಾಲುಗಳೂ ಇವೆ. ಭೌಗೋಳಿಕ ಅಂತರ ಮತ್ತು ಅದಕ್ಕೆ ಸಂಬಂಧಿಸಿದ ವ್ಯವಸ್ಥಾಪನಾ ಸವಾಲುಗಳು ಭಾರತ ಮತ್ತು ರಷ್ಯಾ ನಡುವಿನ ವ್ಯಾಪಾರದ ವೆಚ್ಚವನ್ನು ಹೆಚ್ಚಿಸಬಹುದು. ಕಳಪೆ ಸಾರಿಗೆ ಮೂಲಸೌಕರ್ಯ, ದೀರ್ಘ ಸಾರಿಗೆ ಸಮಯ ಮತ್ತು ಹೆಚ್ಚಿನ ಸಾರಿಗೆ ವೆಚ್ಚಗಳು ರಷ್ಯಾದ ಮಾರುಕಟ್ಟೆಯಲ್ಲಿ ಭಾರತೀಯ ಸರಕುಗಳ ಸ್ಪರ್ಧಾತ್ಮಕತೆಗೆ ಅಡ್ಡಿಯಾಗಬಹುದು. ಭಾರತ ಮತ್ತು ರಷ್ಯಾ ನಡುವೆ ಸೀಮಿತ ನೇರ ಹಡಗು ಮಾರ್ಗಗಳು ಮತ್ತು ವಾಯು ಸಂಪರ್ಕಗಳಿವೆ. ಇದು ವ್ಯಾಪಾರದ ವೆಚ್ಚವನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ ಮತ್ತು ವೆಚ್ಚವನ್ನು ಹೆಚ್ಚಿಸುತ್ತದೆ.
ಈ ವ್ಯಾಪಾರ ಅಸಮತೋಲನ ಹೇಗೆ ಸರಿಪಡಿಸಬಹುದು?: ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ಅಸಮತೋಲನ ಸರಿಪಡಿಸುವ ಪ್ರಶ್ನೆಗೆ ಸಂಬಂಧಿಸಿದಂತೆಯೂ ವಿದೇಶಾಂಗ ಕಾರ್ಯದರ್ಶಿ ಕ್ವಾತ್ರಾ ಪ್ರತಿಕ್ರಿಯಿಸಿದ್ದಾರೆ. ''ಭಾರತವು ಕೃಷಿ, ತಂತ್ರಜ್ಞಾನ, ಔಷಧಗಳು ಮತ್ತು ಸೇವೆಗಳು ಸೇರಿ ಎಲ್ಲ ಕ್ಷೇತ್ರಗಳಲ್ಲಿ ರಫ್ತುಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಭಾರತದಿಂದ ರಷ್ಯಾಕ್ಕೆ ರಫ್ತು ಹೆಚ್ಚಾಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. ಇದು ಎಷ್ಟು ವೇಗವಾಗಿ ಸಂಭವಿಸುತ್ತದೆಯೋ, ಅಷ್ಟು ಬೇಗ ವ್ಯಾಪಾರದ ಅಸಮತೋಲನ ಸರಿಪಡಿಸಬಹುದು'' ಎಂದು ತಿಳಿಸಿದ್ದಾರೆ.
''ಉಭಯ ದೇಶಗಳು 2025ರ ವೇಳೆಗೆಂದು ನಿಗದಿಪಡಿಸಿದ್ದ ಗುರಿಯನ್ನು ಸಹ ಮೀರಿದೆ ಎಂದು ಗಮನಿಸಬೇಕು. ಮುಂಬರುವ ವರ್ಷಗಳಲ್ಲಿ ನಾವು ಇನ್ನೂ ಹೆಚ್ಚಿನ ಗುರಿಯನ್ನು ಹೊಂದಿಸುತ್ತೇವೆ'' ಎಂದು ಅವರು ಹೇಳಿದ್ದಾರೆ. ಕ್ವಾತ್ರಾ ಉಲ್ಲೇಖಿಸಿರುವಂತೆ ಕೃಷಿ, ತಂತ್ರಜ್ಞಾನ, ಔಷಧಗಳು ಮತ್ತು ಸೇವೆಗಳ ಹೊರತಾಗಿಯೂ ಭಾರತವು ಜವಳಿ, ರತ್ನಗಳು ಮತ್ತು ಆಭರಣಗಳನ್ನು ರಷ್ಯಾದ ಮಾರುಕಟ್ಟೆಯಲ್ಲಿ ಉತ್ತೇಜಿಸುವ ಅಗತ್ಯವಿದೆ ಎಂದು ಪರಿಣಿತರು ಭಾವಿಸುತ್ತಾರೆ. ಐಟಿ ಮತ್ತು ಸಾಫ್ಟ್‌ವೇರ್ ಸೇವೆಗಳಲ್ಲಿ ಸಹಕಾರ ವಿಸ್ತರಿಸುವುದು ಮತ್ತು ಉದ್ದೇಶಿತ ಮಾರ್ಕೆಟಿಂಗ್ ಮತ್ತು ಸುಲಭ ವೀಸಾ ಪ್ರಕ್ರಿಯೆಗಳ ಮೂಲಕ ಉಭಯ ದೇಶಗಳ ನಡುವೆ ಪ್ರವಾಸೋದ್ಯಮ ಹೆಚ್ಚಿಸುವುದರ ಮೂಲಕ ಸೇವೆಗಳ ವ್ಯಾಪಾರವನ್ನು ವೃದ್ಧಿಸಬಹುದು.
ಮುಕ್ತ ವ್ಯಾಪಾರ ಒಪ್ಪಂದ: ಉಕ್ರೇನ್‌ನಲ್ಲಿನ ಯುದ್ಧದ ಕುರಿತು ಹೆಚ್ಚಿನ ಪಾಶ್ಚಿಮಾತ್ಯ ಸರ್ಕಾರಗಳು ರಷ್ಯಾವನ್ನು ಪ್ರತ್ಯೇಕಿಸಲು ಮುಂದಾಗಿವೆ. ಈ ಮೂಲಕ ನಿಕಟ ಆರ್ಥಿಕ ಸಂಬಂಧಗಳನ್ನು ನಿರ್ಮಿಸುವ ಗುರಿ ಹೊಂದಿರುವ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಕುರಿತು ಭಾರತ ಮತ್ತು ರಷ್ಯಾ ಸಹ ಸುಧಾರಿತ ಮಾತುಕತೆಗಳು ಮುನ್ನೆಲೆಗೆ ಬಂದಿವೆ. ಭಾರತ ಮತ್ತು ರಷ್ಯಾ ನಡುವೆ ಎಫ್‌ಟಿಎ ಇಲ್ಲದಿರುವುದು ಸಮತೋಲಿತ ವ್ಯಾಪಾರ ಸಂಬಂಧದ ಸಾಮರ್ಥ್ಯ ಮಿತಿಗೊಳಿಸುತ್ತದೆ. ಈ ಎಫ್‌ಟಿಎ ಹೆಚ್ಚಿನ ಮಾರುಕಟ್ಟೆ ಪ್ರವೇಶವನ್ನು ಸುಗಮಗೊಳಿಸುತ್ತದೆ ಮತ್ತು ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ.
ವ್ಯಾಪಾರದ ಅಸಮತೋಲನ ಸರಿಪಡಿಸುವಲ್ಲಿ ಒಂದು ಪ್ರಕಾಶ ಮಾನವಾದ ಭಾಗವೆಂದರೆ ವ್ಯಾಪಾರಕ್ಕಾಗಿ ಸ್ಥಳೀಯ ಕರೆನ್ಸಿಗಳ ಬಳಕೆಯಲ್ಲಿ ಹೆಚ್ಚಳ. ಇದರಿಂದಾಗಿ ಅಮೆರಿಕನ್ ಡಾಲರ್ ಮೇಲಿನ ಅವಲಂಬನೆ ಮತ್ತು ವಹಿವಾಟು ವೆಚ್ಚಗಳು ಕಡಿಮೆ ಆಗುತ್ತವೆ. ರೂಪಾಯಿಯನ್ನು ಜಾಗತಿಕ ವ್ಯಾಪಾರಕ್ಕಾಗಿ ಹೊಸ ಕ್ರಮಗಳನ್ನು ಘೋಷಿಸಿದ ಸುಮಾರು ಎರಡು ವರ್ಷಗಳ ನಂತರ, ಈ ಏಪ್ರಿಲ್‌ನಲ್ಲಿ ರಷ್ಯಾದ ಬ್ಯಾಂಕಿಂಗ್ ಪ್ರಮುಖ ಸ್ಬರ್‌ಬ್ಯಾಂಕ್ ಭಾರತದಿಂದ ರಷ್ಯಾದ ಆಮದುಗಳಿಗೆ ರೂಪಾಯಿ - ರೂಬಲ್ ಪಾವತಿಗಳಿಗೆ ಸ್ಥಿರವಾದ ಹೆಚ್ಚಳವನ್ನು ಕಂಡಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೇಳಿದೆ.
ಸಾರಿಗೆ ಮೂಲಸೌಕರ್ಯ: ಆದರೆ, ಎಲ್ಲಕ್ಕಿಂತ ಹೆಚ್ಚಾಗಿ, ಎರಡು ದೇಶಗಳ ನಡುವಿನ ವ್ಯಾಪಾರ ಅಸಮತೋಲನವನ್ನು ಸರಿಪಡಿಸಲು ಅತ್ಯಂತ ಮುಖ್ಯವಾದ ಸಾರಿಗೆ ಮೂಲಸೌಕರ್ಯವನ್ನು ಸುಧಾರಿಸಲಾಗುತ್ತದೆ. ಈ ನಿಟ್ಟಿನಲ್ಲಿ (ಇರಾನ್‌ನ ಚಬಹಾರ್ ಬಂದರಿನ ಇಂಟರ್ನ್ಯಾಷನಲ್ ನಾರ್ತ್ ಸೌತ್ ಟ್ರಾನ್ಸ್‌ಪೋರ್ಟ್ ಕಾರಿಡಾರ್ (ಐಎನ್ಎಸ್ಟಿಸಿ)ನಲ್ಲಿ ಭಾರತವು ಹೂಡಿಕೆ ಮಾಡುತ್ತಿದೆ. ಈಸ್ಟರ್ನ್ ಮ್ಯಾರಿಟೈಮ್ ಕಾರಿಡಾರ್ಅನ್ನು ಅನ್ವೇಷಿಸಲಾಗುತ್ತಿರುವ ರಷ್ಯಾದ ದೂರದ ಪೂರ್ವದಲ್ಲಿ ಚಿನ್ನೈ ಮತ್ತು ವ್ಲಾಡಿವೋಸ್ಟಾಕ್ಅನ್ನು ಸಂಪರ್ಕಿಸುತ್ತದೆ. ಐಎನ್ಎಸ್ಟಿಸಿಯು 7,200-ಕಿಮೀ ಉದ್ದದ ಬಹು-ಮಾರ್ಗದ ಜಾಲವಾಗಿದ್ದು, ಸರಕು ಸಾಗಣೆಗಾಗಿ ಹಡಗು, ರೈಲು ಮತ್ತು ರಸ್ತೆ ಮಾರ್ಗವಾಗಿದೆ. ಈ 2000ರಲ್ಲಿ ಐಎನ್ಎಸ್ಟಿಸಿ ಒಪ್ಪಂದಕ್ಕೆ ಭಾರತ, ಇರಾನ್ ಮತ್ತು ರಷ್ಯಾ ಸಹಿ ಹಾಕಿವೆ.
ಇತ್ತೀಚೆಗೆ, ರಷ್ಯಾ ಮೊದಲ ಬಾರಿಗೆ ಐಎನ್ಎಸ್ಟಿಸಿ ಮೂಲಕ ಕಲ್ಲಿದ್ದಲು ಸಾಗಿಸುವ ಎರಡು ರೈಲುಗಳನ್ನು ಭಾರತಕ್ಕೆ ಕಳುಹಿಸಿದೆ. ಸೇಂಟ್ ಪೀಟರ್ಸ್‌ಬರ್ಗ್‌ನಿಂದ ಇರಾನ್‌ನ ಬಂದರ್ ಅಬ್ಬಾಸ್ ಬಂದರಿನ ಮೂಲಕ 7,200 ಕಿ.ಮೀ ದೂರದ ಮುಂಬೈ ಬಂದರಿಗೆ ತಲುಪಿದೆ. ಇರಾನ್‌ನಲ್ಲಿರುವ ಚಬಹಾರ್ ಬಂದರು ಮಧ್ಯ ಏಷ್ಯಾ, ಅಫ್ಘಾನಿಸ್ತಾನ ಮತ್ತು ಯುರೇಷಿಯಾದಲ್ಲಿನ ಮಾರುಕಟ್ಟೆಗಳನ್ನು ಪ್ರವೇಶಿಸಲು ಇರಾನ್‌ನ ವಿಶಿಷ್ಟ ಭೌಗೋಳಿಕ ಸ್ಥಾನದಿಂದ ಭಾರತಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದು ಪಾಕಿಸ್ತಾನವನ್ನು ಬೈಪಾಸ್ ಮಾಡುವಾಗ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಕ್ಕೆ ಪ್ರವೇಶವನ್ನು ಒದಗಿಸುವ ಮೂಲಕ ಭಾರತಕ್ಕೆ ಈ ಪ್ರದೇಶದಲ್ಲಿ ಕಾರ್ಯತಂತ್ರದ ನೆಲೆಯನ್ನು ಒದಗಿಸುತ್ತದೆ.
ಅಲ್ಲದೇ, ಈ ಬಂದರು ಭಾರತೀಯ ಸರಕುಗಳಿಗೆ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾವನ್ನು ತಲುಪಲು ಪರ್ಯಾಯ ಮಾರ್ಗವನ್ನು ಒದಗಿಸುತ್ತದೆ. ಪಾಕಿಸ್ತಾನದ ಮೂಲಕ ಹೆಚ್ಚು ವೆಚ್ಚದಾಯಕ ಮತ್ತು ರಾಜಕೀಯವಾಗಿ ಸೂಕ್ಷ್ಮ ಮಾರ್ಗದ ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಚಬಹಾರ್ ಇರಾನ್‌ನ ವಿಶಾಲ ಮಾರುಕಟ್ಟೆಗೆ ಪ್ರವೇಶವನ್ನು ಸುಗಮಗೊಳಿಸುತ್ತದೆ. ಈ ಪ್ರದೇಶದಲ್ಲಿ ಅಸ್ತಿತ್ವವನ್ನು ವಿಸ್ತರಿಸಲು ಭಾರತೀಯ ವ್ಯವಹಾರಗಳಿಗೆ ಗೇಟ್‌ವೇ ಆಗಿ ಕಾರ್ಯನಿರ್ವಹಿಸುತ್ತದೆ.
ಈಸ್ಟರ್ನ್ ಮ್ಯಾರಿಟೈಮ್ ಕಾರಿಡಾರ್: ಮತ್ತೊಂದು ಹೊಸ ಮಾರ್ಗವೆಂದರೆ ಈಸ್ಟರ್ನ್ ಮ್ಯಾರಿಟೈಮ್ ಕಾರಿಡಾರ್. ಅದನ್ನು ಇನ್ನೂ ಅನ್ವೇಷಿಸಲಾಗುತ್ತಿದೆ. ಈ ವರ್ಷದ ಜನವರಿಯಲ್ಲಿ ಚೆನ್ನೈನಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್, ಈ ಮಾರ್ಗವು ಭಾರತ ಮತ್ತು ದೂರದ ಪೂರ್ವ ರಷ್ಯಾ ನಡುವಿನ ಸರಕು ಸಾಗಣೆಯಲ್ಲಿ ಸಮಯ ಮತ್ತು ದೂರವನ್ನು ಹೇಗೆ ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ.
ಪ್ರಸ್ತುತ, ಸೂಯೆಜ್ ಕಾಲುವೆಯ ಮೂಲಕ ಪಶ್ಚಿಮ ಸಮುದ್ರ ಮಾರ್ಗದಿಂದ ಮುಂಬೈ ಬಂದರು ಮತ್ತು ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಬಂದರು ನಡುವಿನ ಅಂತರವು 8,675 ನಾಟಿಕಲ್ ಮೈಲುಗಳು ಅಥವಾ 16,066 ಕಿಮೀ ಆಗಿದ್ದರೆ, ಈಸ್ಟರ್ನ್ ಮ್ಯಾರಿಟೈಮ್ ಕಾರಿಡಾರ್ ಮೂಲಕ ಚೆನ್ನೈ ಬಂದರು ಮತ್ತು ವ್ಲಾಡಿವೋಸ್ಟಾಕ್ ಬಂದರು ನಡುವಿನ ಅಂತರವು ಕೇವಲ 5,647 ನಾಟಿಕಲ್ ಮೈಲುಗಳು ಅಥವಾ 10,458 ಕಿಮೀ ಆಗಿದೆ. ಆಗಿದೆ. ಉಭಯ ರಾಷ್ಟ್ರಗಳ ನಡುವೆ ಸರಕು ಸಾಗಣೆಯಲ್ಲಿ ದಕ್ಷತೆಯನ್ನು ಹೆಚ್ಚಿಸುವುದರ ಹೊರತಾಗಿ ಲಾಜಿಸ್ಟಿಕ್ಸ್ ವೆಚ್ಚವನ್ನು ಅಗಾಧವಾಗಿ 5,608 ಕಿ.ಮೀ ದೂರವನ್ನು ಕಡಿಮೆ ಮಾಡುವುದು ಸ್ಪಷ್ಟವಾದ ಉಳಿತಾಯವಾಗಿದೆ ಎಂದು ಸೋನೊವಾಲ್ ತಿಳಿಸಿದ್ದಾರೆ.
ಈ ಎಲ್ಲದರ ಹಿನ್ನೆಲೆಯಲ್ಲಿ ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ವ್ಯಾಪಾರವು ಎರಡು ಕಡೆಯ ನಡುವಿನ ಚರ್ಚೆಯ ಸಮಯದಲ್ಲಿ ಪ್ರಮುಖ ವಿಷಯವಾಗಿದೆ.