ನವದೆಹಲಿ: ವೊಡಾಫೋನ್ ಐಡಿಯಾ ಚಂದಾದಾರರ ಸಂಖ್ಯೆ ಸತತವಾಗಿ ಇಳಿಕೆಯಾಗುತ್ತಿದೆ. 2023ರ ಡಿಸೆಂಬರ್ನಲ್ಲಿ ಭಾರ್ತಿ ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ಚಂದಾದಾರರ ಸಂಖ್ಯೆ ಏರಿಕೆಯಾಗಿದ್ದರೆ, ವೊಡಾಫೋನ್ ಐಡಿಯಾ ಚಂದಾದಾರರ ಸಂಖ್ಯೆ ಕಡಿಮೆಯಾಗಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ - ಅಂಶಗಳು ತಿಳಿಸಿವೆ.
ವೊಡಾಫೋನ್ ಐಡಿಯಾ ಡಿಸೆಂಬರ್ನಲ್ಲಿ 13.68 ಲಕ್ಷ ಮೊಬೈಲ್ ಚಂದಾದಾರರನ್ನು ಕಳೆದುಕೊಂಡಿದೆ. ನವೆಂಬರ್ನಲ್ಲಿ ಕಂಪನಿಯು 10.73 ಲಕ್ಷ ಚಂದಾದಾರರನ್ನು ಕಳೆದುಕೊಂಡಿತ್ತು. ರಿಲಯನ್ಸ್ ಜಿಯೋ ನವೆಂಬರ್ನಲ್ಲಿ 34.47 ಲಕ್ಷಕ್ಕೆ ಹೋಲಿಸಿದರೆ ಡಿಸೆಂಬರ್ನಲ್ಲಿ 39.94 ಲಕ್ಷ ಹೊಸ ಮೊಬೈಲ್ ಚಂದಾದಾರರನ್ನು ಪಡೆದುಕೊಂಡಿದೆ. ಭಾರ್ತಿ ಏರ್ ಟೆಲ್ ಕೂಡ ಡಿಸೆಂಬರ್ನಲ್ಲಿ 18.5 ಲಕ್ಷ ಹೊಸ ಚಂದಾದಾರರನ್ನು ಪಡೆದಿದೆ. ಇದು ಹಿಂದಿನ ತಿಂಗಳಿಗಿಂತ ಸ್ವಲ್ಪ ಹೆಚ್ಚಾಗಿದೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಡಿಸೆಂಬರ್ ನಲ್ಲಿ 1.5 ಲಕ್ಷ ವೈರ್ಲೆಸ್ ಚಂದಾದಾರರನ್ನು ಕಳೆದುಕೊಂಡಿದೆ. ಇದು ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇಕಡಾ 84 ರಷ್ಟು ಕಡಿಮೆಯಾಗಿದೆ. ಟ್ರಾಯ್ ಅಂಕಿ- ಅಂಶಗಳ ಪ್ರಕಾರ, ನವೆಂಬರ್ನಿಂದ ಡಿಸೆಂಬರ್ ಅಂತ್ಯದವರೆಗೆ ಒಟ್ಟಾರೆ ಹೊಸ ಮೊಬೈಲ್ ಸಂಪರ್ಕಗಳು ಶೇಕಡಾ 35.78 ರಷ್ಟು ಏರಿಕೆಯಾಗಿ 43.22 ಲಕ್ಷಕ್ಕೆ ತಲುಪಿದೆ.