ನವದೆಹಲಿ: 2023-24ರ ಆರ್ಥಿಕ ವರ್ಷದಲ್ಲಿ ಭಾರತದ ಸಮುದ್ರಾಹಾರ ರಫ್ತು ಪ್ರಮಾಣವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಯುಎಸ್ಎ ಮತ್ತು ಚೀನಾ ಅಗ್ರ ಆಮದುದಾರರಾಗಿ ಹೊರಹೊಮ್ಮಿವೆ ಎಂದು ವಾಣಿಜ್ಯ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಭಾರತವು 2023-24ರಲ್ಲಿ 60,523.89 ಕೋಟಿ ರೂ. (7.38 ಬಿಲಿಯನ್ ಡಾಲರ್) ಮೌಲ್ಯದ 17,81,602 ಮೆಟ್ರಿಕ್ ಟನ್ (ಎಂಟಿ) ಸಮುದ್ರಾಹಾರವನ್ನು ರಫ್ತು ಮಾಡಿದೆ.
ಪ್ರಮಾಣ ಮತ್ತು ಮೌಲ್ಯದ ದೃಷ್ಟಿಯಿಂದ ಹೆಪ್ಪುಗಟ್ಟಿಸಲಾದ ಸೀಗಡಿಗಳು ರಫ್ತಿನಲ್ಲಿ ಅತ್ಯಧಿಕ ಪಾಲು ಪಡೆದಿವೆ. 2023-24ರ ಹಣಕಾಸು ವರ್ಷದಲ್ಲಿ ರಫ್ತು ಪ್ರಮಾಣವು ಶೇಕಡಾ 2.67ರಷ್ಟು ಏರಿಕೆಯಾಗಿದೆ. 2022-23ರಲ್ಲಿ ಭಾರತವು 63,969.14 ಕೋಟಿ ರೂಪಾಯಿ (8,094.31 ಮಿಲಿಯನ್ ಡಾಲರ್) ಮೌಲ್ಯದ 17,35,286 ಮೆಟ್ರಿಕ್ ಟನ್ ಸಮುದ್ರಾಹಾರವನ್ನು ರಫ್ತು ಮಾಡಿದೆ.
40,013.54 ಕೋಟಿ ರೂ. (4.9 ಬಿಲಿಯನ್ ಡಾಲರ್) ಮೌಲ್ಯದ ಹೆಪ್ಪುಗಟ್ಟಿಸಲಾದ ಸೀಗಡಿಗಳನ್ನು ಭಾರತ ರಫ್ತು ಮಾಡಿದೆ. ಒಟ್ಟಾರೆ ರಫ್ತಿನಲ್ಲಿ, ಇದು ಪ್ರಮಾಣದಲ್ಲಿ ಶೇಕಡಾ 40.19ರಷ್ಟು ಮತ್ತು ಒಟ್ಟು ಡಾಲರ್ ಗಳಿಕೆಯಲ್ಲಿ ಶೇಕಡಾ 66.12ರಷ್ಟು ಪಾಲನ್ನು ಹೊಂದಿದೆ. ಈ ಅವಧಿಯಲ್ಲಿ ಸೀಗಡಿ ರಫ್ತು ಪ್ರಮಾಣದಲ್ಲಿ ಶೇಕಡಾ 0.69ರಷ್ಟು ಹೆಚ್ಚಳವಾಗಿದೆ.
ಅತಿದೊಡ್ಡ ಮಾರುಕಟ್ಟೆಯಾದ ಯುಎಸ್ಎ 2,97,571 ಮೆಟ್ರಿಕ್ ಟನ್ ಹೆಪ್ಪುಗಟ್ಟಿದ ಸೀಗಡಿಗಳನ್ನು ಆಮದು ಮಾಡಿಕೊಂಡರೆ, ಚೀನಾ (1,48,483 ಮೆಟ್ರಿಕ್ ಟನ್), ಯುರೋಪಿಯನ್ ಯೂನಿಯನ್ (89,697 ಮೆಟ್ರಿಕ್ ಟನ್), ಆಗ್ನೇಯ ಏಷ್ಯಾ (52,254 ಮೆಟ್ರಿಕ್ ಟನ್), ಜಪಾನ್ (35,906 ಮೆಟ್ರಿಕ್ ಟನ್) ಮತ್ತು ಮಧ್ಯಪ್ರಾಚ್ಯ (28,571 ಮೆಟ್ರಿಕ್ ಟನ್) ನಂತರದ ಸ್ಥಾನಗಳಲ್ಲಿವೆ.
ಹೆಪ್ಪುಗಟ್ಟಿಸಲಾದ ಮೀನು ಎರಡನೇ ಅತಿದೊಡ್ಡ ರಫ್ತು ವಸ್ತುವಾಗಿದ್ದು, 5,509.69 ಕೋಟಿ ರೂ.ಗಳನ್ನು (671.17 ಮಿಲಿಯನ್ ಡಾಲರ್) ಮೌಲ್ಯದ ಮೀನುಗಳನ್ನು ರಫ್ತು ಮಾಡಲಾಗಿದೆ. ಇದು ಪ್ರಮಾಣದಲ್ಲಿ ಶೇಕಡಾ 21.42 ಮತ್ತು ಯುಎಸ್ ಡಾಲರ್ ಆದಾಯದಲ್ಲಿ ಶೇಕಡಾ 9.09ರಷ್ಟಿದೆ. ಈ ವರ್ಷ, ಹೆಪ್ಪುಗಟ್ಟಿದ ಮೀನುಗಳ ರಫ್ತು ಪ್ರಮಾಣ ಮತ್ತು ಮೌಲ್ಯದ (ರೂಪಾಯಿ) ದೃಷ್ಟಿಯಿಂದ ಕ್ರಮವಾಗಿ ಶೇಕಡಾ 3.54 ಮತ್ತು ಶೇಕಡಾ 0.12ರಷ್ಟು ಹೆಚ್ಚಳವಾಗಿದೆ.
ಮೌಲ್ಯದ ದೃಷ್ಟಿಯಿಂದ ಯುಎಸ್ಎ ಭಾರತೀಯ ಸಮುದ್ರಾಹಾರದ ಪ್ರಮುಖ ಆಮದು ರಾಷ್ಟ್ರವಾಗಿ ಮುಂದುವರೆದಿದೆ. ಯುಎಸ್ಎ 2,549.15 ಮಿಲಿಯನ್ ಡಾಲರ್ ಮೌಲ್ಯದ ಸಮುದ್ರಾಹಾರ ಆಮದು ಮಾಡಿಕೊಂಡಿರುವ ಯುಎಸ್ ಡಾಲರ್ ಮೌಲ್ಯದ ದೃಷ್ಟಿಯಿಂದ ಶೇಕಡಾ 34.53ರಷ್ಟು ಪಾಲನ್ನು ಹೊಂದಿದೆ.
ಇದನ್ನೂ ಓದಿ: ಮಸಾಲೆ ಪದಾರ್ಥಗಳ ರಫ್ತು ದಾಖಲೆಯ ಏರಿಕೆ: ಕೆಂಪು ಮೆಣಸಿನಕಾಯಿ ರಫ್ತು ಶೇ 15ರಷ್ಟು ಹೆಚ್ಚಳ - Indias spices exports