ನವದೆಹಲಿ:ಸಂಪ್ರದಾಯದಂತೆ ಫೆಬ್ರವರಿ 1 ರಂದು 2025-26ರ ಕೇಂದ್ರ ಬಜೆಟ್ ಮಂಡನೆಯಾಗಲಿದೆಯಾ ಎಂಬ ಬಗ್ಗೆ ಕೇಂದ್ರ ಸರ್ಕಾರ ಇನ್ನಷ್ಟೇ ಖಚಿತಪಡಿಸಬೇಕಿದೆ. ಆದರೆ, ಈ ಬಾರಿ ಫೆಬ್ರವರಿ 1 ಶನಿವಾರ ಆಗಿರುವುದು ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಈ ಹಿಂದಿನ ನಿದರ್ಶನಗಳನ್ನು ನೋಡುವುದಾದರೆ, ಶನಿವಾರ ಬಜೆಟ್ ಮಂಡನೆಯಾದರೆ ಅವತ್ತು ಭಾರತದ ಷೇರು ಮಾರುಕಟ್ಟೆಗಳು ತೆರೆದಿರುವುದು ವಿಶೇಷ.
ಈ ಹಿಂದೆ ಫೆಬ್ರವರಿ 1, 2020 ಮತ್ತು ಫೆಬ್ರವರಿ 28, 2015 ರಂದು, ಕೇಂದ್ರ ಬಜೆಟ್ ಮಂಡನೆಯಿಂದಾಗಿ ಮಾರುಕಟ್ಟೆಗಳು ಶನಿವಾರ ತೆರೆದಿದ್ದವು.
ಪ್ರಸ್ತುತ ವರ್ಷದ ಬಗ್ಗೆ ನೋಡುವುದಾದರೆ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ) ಈಗಾಗಲೇ ಡಿ.23 ರಂದು ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಕೇಂದ್ರ ಬಜೆಟ್ ಮಂಡನೆಯ ಕಾರಣ, ಫೆಬ್ರವರಿ 1, 2025 ರ ಶನಿವಾರದಂದು ವಿಶೇಷ ಟ್ರೇಡಿಂಗ್ ಸೆಷನ್ ನಡೆಯಲಿದೆ ಎಂದು ಹೇಳಿದೆ.
"ಕೇಂದ್ರ ಬಜೆಟ್ ಮಂಡನೆ ಕಾರಣ, ಸ್ಟಾಕ್ ಎಕ್ಸ್ಚೇಂಜ್ ಫೆಬ್ರವರಿ 01, 2025 ರಂದು ನಿಗದಿತ ಮಾರುಕಟ್ಟೆ ಸಮಯದ ಪ್ರಕಾರ ವ್ಯಾಪಾರ ವಹಿವಾಟು ನಡೆಸಲಿದೆ" ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಪೂರ್ವಭಾವಿ ಸೆಷನ್ ಬೆಳಗ್ಗೆ 9 ರಿಂದ 9.08 ರವರೆಗೆ ನಡೆಯಲಿದೆ. ಇದರ ನಂತರ, ಬೆಳಗ್ಗೆ 9.15 ರಿಂದ ಮಧ್ಯಾಹ್ನ 3.30 ರವರೆಗೆ ಸಾಮಾನ್ಯ ಷೇರು ವಹಿವಾಟು ಸೆಷನ್ ಇರಲಿದೆ.