ತೆರಿಗೆಗಳು, ಸಾರಿಗೆ ವೆಚ್ಚಗಳು, ಸ್ಥಳೀಯ ಬೇಡಿಕೆ ಮತ್ತು ಸರ್ಕಾರದ ಪಾಲಸಿಗಳು ಸೇರಿದಂತೆ ಇತರೆ ಅಂಶಗಳಿಂದಾಗಿ ಚಿನ್ನದ ಬೆಲೆ ಆಯಾ ರಾಜ್ಯಗಳಲ್ಲಿ ಬದಲಾಗುತ್ತವೆ. ಕಡಿಮೆ ತೆರಿಗೆಗಳು ಮತ್ತು ಮಾರುಕಟ್ಟೆ ಸ್ಪರ್ಧೆಯನ್ನು ಹೊಂದಿರುವ ರಾಜ್ಯಗಳಲ್ಲಿ ಹೆಚ್ಚಿನ ತೆರಿಗೆಗಳು ಮತ್ತು ಸೀಮಿತ ಮಾರುಕಟ್ಟೆ ಸ್ಪರ್ಧೆ ಇರುವ ರಾಜ್ಯಗಳಿಗೆ ಹೋಲಿಸಿದರೆ ಚಿನ್ನದ ಬೆಲೆ ಅಗ್ಗವಾಗಿರುತ್ತದೆ.
ಹಳದಿ ಲೋಹದ ಮಾರಾಟದಲ್ಲಿ ಹೆಚ್ಚು ಪಾರದರ್ಶಕತೆ ತರಲು ರಾಜ್ಯಗಳಾದ್ಯಂತ 'ಒಂದು ರಾಷ್ಟ್ರ, ಒಂದು ದರ' (ONOR) ನೀತಿಯನ್ನು ಜಾರಿಗೆ ತರಲು ಆಭರಣ ಉದ್ಯಮ ಒಗ್ಗೂಡಿದೆ. ಇನ್ನು ರತ್ನ ಮತ್ತು ಆಭರಣ ಮಂಡಳಿ (ಜಿಜೆಸಿ) ಸೆಪ್ಟೆಂಬರ್‌ನಲ್ಲಿ ಸಭೆ ಸೇರಲಿದ್ದು, ಬಳಿಕ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.
ದೇಶಾದ್ಯಂತ ಏಕರೂಪ ಚಿನ್ನದ ದರ:"ಒಂದು ರಾಷ್ಟ್ರ, ಒಂದು ಚಿನ್ನದ ದರ" ನೀತಿಯು ದೇಶಾದ್ಯಂತ ಚಿನ್ನದ ಬೆಲೆಗಳನ್ನು ಪ್ರಮಾಣೀಕರಿಸುವ ಗುರಿಯನ್ನು ಹೊಂದಿದೆ. ಇದು ಹೆಚ್ಚಿನ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಗಾಗಿ ಪ್ರಾದೇಶಿಕ ವ್ಯತ್ಯಾಸಗಳನ್ನು ತೆಗೆದುಹಾಕುತ್ತದೆ. ಈ ನೀತಿಯು ದೇಶಾದ್ಯಂತ ಒಂದೇ ಚಿನ್ನದ ದರ ಇರುವಂತೆ ಮಾಡಲು ಪ್ರಯತ್ನಿಸುತ್ತದೆ. ವಿವಿಧ ಸ್ಥಳೀಯ ತೆರಿಗೆಗಳು ಮತ್ತು ಮಾರುಕಟ್ಟೆ ಪರಿಸ್ಥಿತಿಗಳಿಂದ ಉಂಟಾಗುವ ಪ್ರಾದೇಶಿಕ ವ್ಯತ್ಯಾಸಗಳನ್ನು ತೆಗೆದುಹಾಕುತ್ತದೆ. ಪ್ರಸ್ತುತ, ವಿಭಿನ್ನ ತೆರಿಗೆ ಪದ್ಧತಿಯಿಂದ ಮತ್ತು ಸ್ಥಳೀಯ ಬೇಡಿಕೆ -ಪೂರೈಕೆ ಡೈನಾಮಿಕ್ಸ್ ಕಾರಣದಿಂದಾಗಿ ಭಾರತದಲ್ಲಿ ಚಿನ್ನದ ಬೆಲೆಗಳು ಒಂದು ರಾಜ್ಯದಿಂದ ಇನ್ನೊಂದಕ್ಕೆ ಗಮನಾರ್ಹವಾಗಿ ಬದಲಾಗುತ್ತದೆ.
ಇದು ಖರೀದಿದಾರರು ಹಾಗೂ ಮಾರಾಟಗಾರರಿಗೆ ಗೊಂದಲ ಮತ್ತು ಅನಾನುಕೂಲತೆಗೆ ಕಾರಣವಾಗಿದೆ. ಏಕೆಂದರೆ ಅವರು ಏರಿಳಿತದ ಬೆಲೆಗಳ ಮೂಲಕ ನ್ಯಾವಿಗೇಟ್ ಮಾಡುತ್ತಾರೆ. ಆಭರಣ ಉದ್ಯಮವು ಜಿಎಸ್‌ಟಿ ಸೇರಿದಂತೆ ಪಾರದರ್ಶಕತೆ ಕ್ರಮಗಳನ್ನು ಅಳವಡಿಸಿಕೊಳ್ಳುವಲ್ಲಿ ಮತ್ತು ಕಡ್ಡಾಯ ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ ಸಂಖ್ಯೆಗಳನ್ನು ಅಳವಡಿಸುವಲ್ಲಿ ವೇಗ ಸಾಧಿಸಿದೆ.
ಒಂದು ರಾಷ್ಟ್ರ, ಒಂದು ಚಿನ್ನದ ದರ ನೀತಿಯ ಪ್ರಯೋಜನಗಳೇನು?:
"ಒಂದು ರಾಷ್ಟ್ರ, ಒಂದು ಚಿನ್ನದ ದರ" ನೀತಿಯ ಪ್ರಮುಖ ಪ್ರಯೋಜನವೆಂದರೆ ಗ್ರಾಹಕರ ವಿಶ್ವಾಸ ಹೆಚ್ಚಿಸುತ್ತದೆ.
ಪ್ರಾದೇಶಿಕ ಬೆಲೆ ವ್ಯತ್ಯಾಸಗಳಿಂದಾಗಿ ಹೆಚ್ಚಿನ ಪಾವತಿಯ ಬಗ್ಗೆ ಚಿಂತಿಸದೆ ಗ್ರಾಹಕರು ಖರೀದಿ ನಿರ್ಧಾರ ತೆಗೆದುಕೊಳ್ಳಬಹುದು. ಇದು ಹೆಚ್ಚು ಸ್ಥಿರ ಮತ್ತು ಊಹಿಸಬಹುದಾದ ಮಾರುಕಟ್ಟೆಗೆ ಕಾರಣವಾಗಬಹುದು. ವಿಶ್ವಾಸಾರ್ಹ ಆಸ್ತಿಯಾಗಿ ಚಿನ್ನ ಮೇಲೆ ಹೂಡಿಕೆ ಮಾಡಲು ಹೆಚ್ಚಿನ ಜನರನ್ನು ಪ್ರೋತ್ಸಾಹಿಸುತ್ತದೆ.
ಭಾರತದಾದ್ಯಂತ ಈ ನೀತಿಯ ಅನುಷ್ಠಾನವು ದೇಶದ ಚಿನ್ನದ ಉದ್ಯಮವನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದೆ. ಪಾರದರ್ಶಕ ಮತ್ತು ನ್ಯಾಯೋಚಿತ ಬೆಲೆ ವ್ಯವಸ್ಥೆಯೊಂದಿಗೆ, ಚಿನ್ನದ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರ ಭಾಗವಹಿಸುವಿಕೆಯನ್ನು ಕಾಣಬಹುದು.
ಇದು ಚಿನ್ನಕ್ಕೆ ಹೆಚ್ಚಿನ ಬೇಡಿಕೆಗೆ ಕಾರಣವಾಗಬಹುದು, ಚಿನ್ನ ಗಣಿಗಾರರು, ರಿಫೈನರ್‌ಗಳು (ಸಂಸ್ಕರಣಾಗಾರರು) ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಸಮಾನ ಪ್ರಯೋಜವಾಗಲಿದೆ. ಈ ನೀತಿಯನ್ನು ಯಶಸ್ವಿಯಾಗಿ ಜಾರಿಗೆ ತಂದರೆ, ಗ್ರಾಹಕರ ವಿಶ್ವಾಸವನ್ನು ಹೆಚ್ಚಿಚಿಸಬಹುದು, ವ್ಯವಹಾರ ಚಟುವಟಿಕೆಯನ್ನು ಸರಳಗೊಳಿಸಬಹುದು ಮತ್ತು ಭಾರತದಲ್ಲಿ ಚಿನ್ನದ ಉದ್ಯಮದ ಒಟ್ಟಾರೆ ಬೆಳವಣಿಗೆಯನ್ನು ಹೆಚ್ಚಿಸಬಹುದು.