ನವದೆಹಲಿ: ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ವಿನಿಮಯ ಮೀಸಲು ಹೊಂದಿರುವ ಜಗತ್ತಿನ ಪ್ರಮುಖ ರಾಷ್ಟ್ರಗಳಿಗೆ ಹೋಲಿಸಿದರೆ, ಇತ್ತೀಚೆಗೆ ಮುಗಿದ 2023-24ರ ಹಣಕಾಸು ವರ್ಷದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ಅತ್ಯಧಿಕ ಏರಿಕೆಯಾಗಿದೆ ಎಂದು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆ ಪ್ರತಿಪಾದಿಸಿದೆ.
ಹಿಂದಿನ ಹಣಕಾಸು ವರ್ಷದಲ್ಲಿ ವಿದೇಶಿ ವಿನಿಮಯ ಸಂಗ್ರಹ 68 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿದೆ. ಭಾರತಕ್ಕೆ ಹೆಚ್ಚಿನ ಬಂಡವಾಳದ ಒಳಹರಿವಿನ ಮಧ್ಯೆ ಚಾಲ್ತಿ ಖಾತೆ ಕೊರತೆ (ಸಿಎಡಿ) ಕಡಿಮೆಯಾಗಿರುವುದು 2023-24ರಲ್ಲಿ ವಿದೇಶಿ ವಿನಿಮಯ ಮೀಸಲು ಹೆಚ್ಚಾಗಲು ಕಾರಣವಾಗಿದೆ ಎಂದು ಸರ್ಕಾರ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಿದೆ.
ಹೆಚ್ಚು ಪ್ರಮಾಣದ ವಿದೇಶಿ ವಿನಿಮಯ ಮೀಸಲುಗಳ ಸಂಗ್ರಹವು ಬಾಹ್ಯ ಏರಿಳಿತಗಳಿಂದ ದೇಶದ ಆರ್ಥಕತೆಗೆ ಸುರಕ್ಷತೆ ನೀಡುತ್ತದೆ. ಭಾರತವು ತನ್ನ ಬಾಹ್ಯ ಪಾವತಿಗಳನ್ನು ಮಾಡಲು ಈ ಮೀಸಲುಗಳು ನಿಧಿಯನ್ನು ಒದಗಿಸುತ್ತವೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.
ಜೂನ್ 21, 2024 ರಂದು ಭಾರತದ ವಿದೇಶಿ ವಿನಿಮಯ ಮೀಸಲು ಸಂಗ್ರಹ 653.7 ಬಿಲಿಯನ್ ಡಾಲರ್ ಆಗಿತ್ತು. ಇದು 2024-25 ಕ್ಕೆ ಯೋಜಿಸಲಾದ 10 ತಿಂಗಳ ಆಮದನ್ನು ಸರಿದೂಗಿಸಲು ಸಾಕಾಗುತ್ತದೆ ಮತ್ತು ಮಾರ್ಚ್ 2024 ರ ಅಂತ್ಯದ ವೇಳೆಗೆ ಬಾಕಿ ಇರುವ ಒಟ್ಟು ಬಾಹ್ಯ ಸಾಲದ ಶೇಕಡಾ 98 ಕ್ಕಿಂತ ಹೆಚ್ಚು ಸಾಲದ ಮರುಪಾವತಿಗೆ ಸಾಕಾಗುವಷ್ಟಿದೆ.
ವಿದೇಶಿ ವಿನಿಮಯ ಮೀಸಲುಗಳು (ಎಫ್ಎಕ್ಸ್ ಮೀಸಲುಗಳು) ದೇಶದ ಕೇಂದ್ರ ಬ್ಯಾಂಕ್ ಅಥವಾ ವಿತ್ತೀಯ ಪ್ರಾಧಿಕಾರ ಹೊಂದಿರುವ ಸ್ವತ್ತುಗಳಾಗಿವೆ. ಇದನ್ನು ಸಾಮಾನ್ಯವಾಗಿ ಅಮೆರಿಕನ್ ಡಾಲರ್ ಮತ್ತು ಸ್ವಲ್ಪ ಮಟ್ಟಿಗೆ, ಯುರೋ, ಜಪಾನೀಸ್ ಯೆನ್ ಮತ್ತು ಪೌಂಡ್ ಸ್ಟರ್ಲಿಂಗ್ ಕರೆನ್ಸಿಗಳ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ದೇಶದ ವಿದೇಶಿ ವಿನಿಮಯ ಮೀಸಲು ಕೊನೆಯದಾಗಿ ಅಕ್ಟೋಬರ್ 2021 ರಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತ್ತು. ನಂತರ ದುಬಾರಿ ರಫ್ತುಗಳಿಂದಾಗಿ ಮೀಸಲು ಕುಸಿದಿದ್ದವು.
2023-24ರ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಮಂಡಿಸಿದರು. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಸಿದ್ಧಪಡಿಸಿದ ಮತ್ತು ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ರೂಪಿಸಲಾದ ಆರ್ಥಿಕ ಸಮೀಕ್ಷೆ ದಾಖಲೆಯು ಆರ್ಥಿಕತೆಯ ಸ್ಥಿತಿ ಮತ್ತು 2023-24 ರ (ಏಪ್ರಿಲ್-ಮಾರ್ಚ್) ವಿವಿಧ ಸೂಚಕಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ ಮತ್ತು ಪ್ರಸಕ್ತ ವರ್ಷದ ಕೆಲ ಆರ್ಥಿಕ ದೃಷ್ಟಿಕೋನವನ್ನು ನೀಡುತ್ತದೆ.
ಇದನ್ನೂ ಓದಿ : ಇನ್ನೂ 20 ವರ್ಷ ಕಲ್ಲಿದ್ದಲಿನ ಅವಲಂಬನೆ ಕಡಿಮೆ ಮಾಡಲಾಗದು: ಆರ್ಥಿಕ ಸಮೀಕ್ಷೆ ವರದಿ - Economic Survey