ನವದೆಹಲಿ:ಸಾಫ್ಟ್ ಬ್ಯಾಂಕ್ ಬೆಂಬಲಿತ ಸಾಸ್ ಪ್ಲಾಟ್ ಫಾರ್ಮ್ ಯುನಿಕಾಮರ್ಸ್ ಇಸೊಲ್ಯೂಷನ್ಸ್ ಲಿಮಿಟೆಡ್ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಯನ್ನು ಆಗಸ್ಟ್ 6 ರಂದು ಬಿಡುಗಡೆ ಮಾಡಲಿದೆ. ಆರಂಭಿಕ ಷೇರು ಮಾರಾಟವು ಆಗಸ್ಟ್ 8 ರಂದು ಕೊನೆಗೊಳ್ಳಲಿದೆ ಮತ್ತು ಆಂಕರ್ ಹೂಡಿಕೆದಾರರ ಬಿಡ್ಡಿಂಗ್ ಆಗಸ್ಟ್ 5 ರಂದು ಒಂದು ದಿನ ತೆರೆದಿರುತ್ತದೆ ಎಂದು ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಆರ್ಎಚ್ಪಿ) ತಿಳಿಸಿದೆ.
ಈ ಐಪಿಒ ಬಿಡುಗಡೆಯು ಸಂಪೂರ್ಣವಾಗಿ ಮಾರಾಟದ ಪ್ರಸ್ತಾಪ (ಒಎಫ್ಎಸ್) ಆಗಿದ್ದು, ಇದು 2.56 ಕೋಟಿ ಈಕ್ವಿಟಿ ಷೇರುಗಳನ್ನು ಒಟ್ಟುಗೂಡಿಸುತ್ತದೆ. ಐಪಿಒ ಸಂಪೂರ್ಣವಾಗಿ ಒಎಫ್ಎಸ್ ಆಗಿರುವುದರಿಂದ, ಸಂಪೂರ್ಣ ಆದಾಯವು ಮಾರಾಟದ ಷೇರುದಾರರಿಗೆ ಹೋಗುತ್ತದೆ.
ಒಎಫ್ಎಸ್ ಅಡಿ ಜಪಾನ್ನ ಸಾಫ್ಟ್ ಬ್ಯಾಂಕ್ ಅಂಗಸಂಸ್ಥೆಯಾದ ಎಸ್ ಬಿ ಇನ್ವೆಸ್ಟ್ ಮೆಂಟ್ ಹೋಲ್ಡಿಂಗ್ಸ್ (ಯುಕೆ) ಲಿಮಿಟೆಡ್ 1.61 ಕೋಟಿ ಷೇರುಗಳನ್ನು ಮಾರಾಟ ಮಾಡಲಿದ್ದು, ಪ್ರವರ್ತಕ ಏಸ್ವೆಕ್ಟರ್ ಲಿಮಿಟೆಡ್ (ಹಿಂದೆ ಸ್ನ್ಯಾಪ್ ಡೀಲ್ ಲಿಮಿಟೆಡ್ ಆಗಿತ್ತು) 94.38 ಲಕ್ಷ ಷೇರುಗಳನ್ನು ಮಾರಾಟ ಮಾಡಲಿದೆ.
2012 ರಲ್ಲಿ ಸ್ಥಾಪನೆಯಾದ ಯುನಿಕಾಮರ್ಸ್ ಇಸೊಲ್ಯೂಷನ್ಸ್ ಕಂಪನಿ ಭಾರತದ ಪ್ರಮುಖ ಇ-ಕಾಮರ್ಸ್ ಸಕ್ರಿಯಗೊಳಿಸುವ ಸಾಫ್ಟ್ ವೇರ್-ಆಸ್-ಎ-ಸರ್ವೀಸ್ (ಸಾಸ್) ವೇದಿಕೆಯಾಗಿದೆ. ಕಂಪನಿಯ ಸಾಸ್ ಪರಿಹಾರಗಳ ಸೂಟ್ ಬ್ರಾಂಡ್ ಗಳು, ಚಿಲ್ಲರೆ ವ್ಯಾಪಾರಿಗಳು, ಮಾರುಕಟ್ಟೆಗಳು ಮತ್ತು ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರಿಗೆ ಇ-ಕಾಮರ್ಸ್ ಕಾರ್ಯಾಚರಣೆಗಳ ಎಂಡ್-ಟು-ಎಂಡ್ ನಿರ್ವಹಣೆಯನ್ನು ಸಾಧ್ಯವಾಗಿಸುತ್ತದೆ.
ಇದು ಲೆನ್ಸ್ ಕಾರ್ಟ್, ಫ್ಯಾಬಿಂಡಿಯಾ, ಝಿವಾಮೆ, ಟಿಸಿಎನ್ಎಸ್, ಮಾಮಾ ಅರ್ತ್, ಇಮಾಮಿ, ಶುಗರ್, ಬಿಒಎಟಿ, ಪೋರ್ಟ್ರಾನಿಕ್ಸ್, ಫಾರ್ಮ್ ಈಸಿ, ಸೆಲ್ಲೊ, ಅರ್ಬನ್ ಕಂಪನಿ, ಮೆನ್ಸಾ, ಶಿಪ್ ರಾಕೆಟ್, ಎಕ್ಸ್ಪ್ರೆಸ್ ಬೀಸ್ ಸೇರಿದಂತೆ ಭಾರತದಲ್ಲಿ ಅನೇಕ ಕಂಪನಿಗಳಿಗೆ ಸೇವೆ ನೀಡುತ್ತಿದೆ. ಮತ್ತಷ್ಟು ಕಂಪನಿಗಳನ್ನು ಸೇರಿಸಿಕೊಳ್ಳುವ ಮೂಲಕ ಸಾಗರೋತ್ತರ ಕಾರ್ಯಾಚರಣೆಗಳನ್ನು ವಿಸ್ತರಿಸಲಾಗುವುದು ಎಂದು ಫೆಬ್ರವರಿಯಲ್ಲಿ ಯುನಿಕಾಮರ್ಸ್ ಹೇಳಿತ್ತು.
ಇದು ಈಗಾಗಲೇ ಸಿಂಗಾಪುರ್, ಫಿಲಿಪೈನ್ಸ್, ಇಂಡೋನೇಷ್ಯಾ, ಯುಎಇ ಮತ್ತು ಸೌದಿ ಅರೇಬಿಯಾದಲ್ಲಿ 46 ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ ಮತ್ತು ಈಗ ಹೆಚ್ಚಿನ ಗ್ರಾಹಕರನ್ನು ಸೇರಿಸುವ ಮೂಲಕ ಈ ಕಾರ್ಯಾಚರಣೆಗಳನ್ನು ವಿಸ್ತರಿಸುತ್ತಿದೆ. ಐಐಐಎಫ್ಎಲ್ ಸೆಕ್ಯುರಿಟೀಸ್ ಮತ್ತು ಸಿಎಲ್ಎಸ್ಎ ಇಂಡಿಯಾ ಈ ಐಪಿಒಗೆ ಲೀಡ್ ಮ್ಯಾನೇಜರ್ ಆಗಿವೆ. ಷೇರುಗಳನ್ನು ಬಿಎಸ್ಇ ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲು ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ : ಭಾರತ ಈಗ ವಿಶ್ವದ 4ನೇ ಅತಿದೊಡ್ಡ ಷೇರು ಮಾರುಕಟ್ಟೆ: 462 ಲಕ್ಷ ಕೋಟಿ ರೂ.ಗೆ ತಲುಪಿದ ಬಂಡವಾಳ - best performing stock market