ನವದೆಹಲಿ: ಸೆಮಿಕಂಡಕ್ಟರ್ ವಲಯದಲ್ಲಿ ಪ್ಯಾಕೇಜಿಂಗ್, ವಿನ್ಯಾಸ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಮುಂತಾದ ಉದ್ಯಮಗಳ ಸ್ಥಾಪನೆಗೆ 2.5 ಲಕ್ಷ ಕೋಟಿ ರೂ.ಗೂ ಅಧಿಕ ಮೌಲ್ಯದ ಬಂಡವಾಳ ಹೂಡಿಕೆ ಪ್ರಸ್ತಾಪಗಳನ್ನು ಭಾರತ ಸ್ವೀಕರಿಸಿದೆ ಎಂದು ಕೇಂದ್ರ ಸರಕಾರ ಗುರುವಾರ ತಿಳಿಸಿದೆ.
ಎಸ್ಸಿಎಲ್ ಮೊಹಾಲಿಯಲ್ಲಿ ನಡೆದ 'ಇಂಡಿಯಾ ಸೆಮಿಕಂಡಕ್ಟರ್ ಮತ್ತು ಪ್ಯಾಕೇಜಿಂಗ್ ಇಕೋಸಿಸ್ಟಮ್ ಕಾನ್ಫರೆನ್ಸ್' (ಐಎಸ್ಪಿಇಸಿ) ಸಮಾವೇಶದಲ್ಲಿ ವರ್ಚುವಲ್ ಮೋಡ್ ಮೂಲಕ ಭಾಗವಹಿಸಿ ಮಾತನಾಡಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಸೆಮಿಕಂಡಕ್ಟರ್ ವಿಷಯದಲ್ಲಿ ಭಾರತ ಅಗ್ರಗಣ್ಯ ದೇಶವಾಗುತ್ತಿದೆ ಎಂದು ಹೇಳಿದರು.
"ವಿವಿಧ ವಲಯಗಳಲ್ಲಿ ಭಾರತ ಸರ್ಕಾರವು 2.5 ಲಕ್ಷ ಕೋಟಿ ರೂ.ಗಳ ಹೂಡಿಕೆ ಪ್ರಸ್ತಾಪಗಳನ್ನು ಸ್ವೀಕರಿಸಿದ್ದು, ನಾವು ಒಂದು ಮಹತ್ವದ ಮೈಲಿಗಲ್ಲನ್ನು ತಲುಪುತ್ತಿದ್ದೇವೆ" ಎಂದು ಸಚಿವ ಚಂದ್ರಶೇಖರ್ ಸಭೆಗೆ ತಿಳಿಸಿದರು.
"ಸೆಮಿಕಂಡಕ್ಟರ್ ತಯಾರಿಕಾ ಉದ್ಯಮದಲ್ಲಿ ನಾವು ಏನೂ ಇಲ್ಲದ ಸ್ಥಿತಿಯಿಂದ ಹೊರಬಂದಿದ್ದು, ಜಾಗತಿಕ ಸೆಮಿಕಂಡಕ್ಟರ್ ಕಂಪನಿಗಳಿಗೆ ಪ್ರತಿಭಾವಂತರನ್ನು ಒದಗಿಸುವುದು ಮಾತ್ರವಲ್ಲದೆ ಈಗ ಸೆಮಿಕಂಡಕ್ಟರ್ ತಯಾರಿಕೆ, ವಿನ್ಯಾಸ ಮುಂತಾದ ವಲಯಗಳಲ್ಲಿ ಬಂಡವಾಳ ಹೂಡಿಕೆ ಪಡೆಯುವ ಮಟ್ಟಕ್ಕೆ ತಲುಪಿದ್ದೇವೆ" ಎಂದು ಅವರು ಹೇಳಿದರು.