ಮುಂಬೈ (ಮಹಾರಾಷ್ಟ್ರ) :ಅಮೆರಿಕನ್ ಡಾಲರ್ ಎದುರು ದಾಖಲೆಯ ಗರಿಷ್ಠ ಮಟ್ಟಕ್ಕೆ ಕುಸಿದಿರುವ ಭಾರತದ ರೂಪಾಯಿ ಮೌಲ್ಯ ಮಂಗಳವಾರದ ವಹಿವಾಟಿನಲ್ಲಿ ತುಸು ಚೇತರಿಕೆ ಕಂಡಿದೆ. ಈ ಹಿಂದಿಗಿಂತಲೂ ಅತಿ ಕನಿಷ್ಟ ಮೌಲ್ಯಕ್ಕೆ ಇಳಿದಿದ್ದ ರೂಪಾಯಿ ಇಂದು ಡಾಲರ್ ಎದುರು 8 ಪೈಸೆ ಏರಿಕೆಯಾಗಿ 86.62ಕ್ಕೆ ಸ್ಥಿರವಾಯಿತು.
ಕಚ್ಚಾ ತೈಲ ಬೆಲೆ ಏರಿಕೆ ಮತ್ತು ವಿದೇಶಿ ಬಂಡವಾಳ ಹಿಂತೆಗೆತದ ಹಿನ್ನಡೆಯ ಹೊರತಾಗಿಯೂ, ದೇಶೀಯ ಷೇರು ಮಾರುಕಟ್ಟೆಗಳ ಏರಿಕೆ, ಡಾಲರ್ ನಿಯಮ ಸಡಿಲವಾಗಿದ್ದು, ಭಾರತದ ರೂಪಾಯಿಗೆ ಬಲ ತುಂಬಿತು. ಇದರಿಂದ ಮೌಲ್ಯದಲ್ಲಿ ಏರಿಕೆ ದಾಖಲಿಸಿತು.
ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಮಂಗಳವಾರ ರೂಪಾಯಿ 86.57 ರಿಂದ ಆರಂಭಗೊಂಡಿತು. ಬಳಿಕ ಮಧ್ಯಂತರದಲ್ಲಿ 86.45 ಕ್ಕೆ ತಲುಪಿತ್ತು. ದಿನದ ಕೊನೆಯಲ್ಲಿ 86.62 ಕ್ಕೆ ಮುಕ್ತಾಯವಾಯಿತು. ಇದು ಹಿಂದಿನ ದಿನವಾದ ಮಂಗಳವಾರದ 86.70 ಕ್ಕಿಂತಲೂ 8 ಪೈಸೆ ಲಾಭವಾಯಿತು.
ಒಂದೇ ದಿನ ಗರಿಷ್ಠ ಕುಸಿತ:ಸೋಮವಾರವಷ್ಟೆ, ರೂಪಾಯಿ ಮೌಲ್ಯವು ಸುಮಾರು ಎರಡು ವರ್ಷಗಳಲ್ಲಿ ಒಂದೇ ದಿನದ ವಹಿವಾಟಿನಲ್ಲಿ ತೀವ್ರ ಕುಸಿತ ದಾಖಲಿಸಿತ್ತು. ಡಾಲರ್ ಎದುರು 66 ಪೈಸೆ ಇಳಿಯುವ ಮೂಲಕ ಸಾರ್ವಕಾಲಿಕ 86.70ಕ್ಕೆ ತಲುಪಿತ್ತು. ಇದಕ್ಕೂ ಮೊದಲು ಅಂದರೆ, 2023ರ ಫೆಬ್ರವರಿ 6 ರಂದು ದಾಖಲೆಯ 68 ಪೈಸೆ ಕುಸಿತ ಕಂಡಿತ್ತು.